ಕನ್ನಡಪ್ರಭ ವಾರ್ತೆ ನಾಗಮಂಗಲ
ಬೆಂಗಳೂರಿನ ಕತ್ತರಗುಪ್ಪೆಯ ವಾಸಿ ರವೀಂದ್ರರಾಜ್ ಕೃಷ್ಣರ ಮಕ್ಕಳಾದ ಮವೀನ (20) ಮತ್ತು ಶ್ಯಾಮ್ (18) ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಅಕ್ಕ-ತಮ್ಮ. ಹಿತಶ್ರೀ, ಕಲಾಶ್ರೀ ಹಾಗೂ ಕಾರು ಚಾಲಕ ಚೇತನ್ ಎಂಬುವರೇ ಗಾಯಗೊಂಡವರು.
ಬೆಂಗಳೂರಿನಿಂದ ಸ್ವಿಫ್ಟ್ ಕಾರಿನಲ್ಲಿ ಒಂದೇ ಕುಟುಂಬದ ಐವರು ತಾಲೂಕಿನ ಕೋಟೆಬೆಟ್ಟದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಗಮಂಗಲ ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡು ಮವೀನ ಹಾಗೂ ಶ್ಯಾಮ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಇವರ ತಾಯಿ ಹಾಗೂ ದೊಡ್ಡಮ್ಮ ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್ಐ ವೈ.ಎನ್.ರವಿಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ, ಕಾರಿನಲ್ಲಿ ಮೃತಪಟ್ಟಿದ್ದ ಮವೀನ ಹಾಗೂ ಶ್ಯಾಮ್ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಪೊಲೀಸರು ಕಾರು ಮತ್ತು ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮವಹಿಸಿದ್ದಾರೆ.