)
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವ ನಡವಳಿಕೆ ಮಾಡಬಾರದೆಂಬ ನಿಯಮಗಳನ್ನು ಪಾಲಿಸುವಂತೆ ಬಿಎಂಆರ್‌ಸಿಎಲ್ ಸಾಕಷ್ಟು ಬಾರಿ ಸೂಚಿಸಿದೆ. ಮೆಟ್ರೋ ರೈಲಿನಲ್ಲೂ ಈ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಆದರೂ ಪ್ರತಿನಿತ್ಯ ಒಂದಲ್ಲ ಒಂದು ಮಾರ್ಗದಲ್ಲಿ ಕಾನೂನು ಉಲ್ಲಂಘಿಸುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕಾಗಿ ಪ್ರಯಾಣಿಕರ ನಡುವೆ ಜಗಳ, ತಳ್ಳಾಟ, ನೂಕಾಟಗಳೂ ನಡೆದಿವೆ. ಕೊನೆಗೆ ಮೆಟ್ರೋ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸಿದ ಪ್ರಕರಣಗಳೂ ಸಾಕಷ್ಟಿವೆ.
ಜಾಗೃತಿ ಅಭಿಯಾನ:ಮೆಟ್ರೋ ರೈಲ್ವೆಸ್ (ಆಪರೇಷನ್ ಅಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದಲ್ಲಿ ಕೆಲ ಅಪರಾಧಗಳು ದಂಡಕ್ಕೆ ಒಳಪಡುತ್ತವೆ. ಈ ಹಿನ್ನೆಲೆಯಲ್ಲಿ ನಿಗಮ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ.
ಇಬ್ಬರು ಗೃಹ ರಕ್ಷಕರನ್ನು ಒಳಗೊಂಡ (ಹೋಮ್ ಗಾರ್ಡ್) ವಿಶೇಷ ತಂಡಗಳನ್ನು ಮೆಟ್ರೋ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳಿವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ರೈಲಿನಲ್ಲಿ 57,538 ಪ್ರಯಾಣಿಕರು ಜೋರಾಗಿ ಸಂಗೀತ ಕೇಳುವುದನ್ನು ಪತ್ತೆ ಮಾಡಿ ನಿಲ್ಲಿಸುವಂತೆ ಸೂಚಿಸಲಾಗಿದೆ. ಮೀಸಲಾಗಿದ್ದ ಆಸನಗಳನ್ನು ಅತಿಕ್ರಮಿಸಿದ್ದ 37,038 ಪ್ರಯಾಣಿಕರಿಗೆ ಎಚ್ಚರಿಕೆ ನೀಡಿ ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಭದ್ರತಾ ಸಿಬ್ಬಂದಿ ಕೊಡಿಸಿದ್ದಾರೆ. ಜತೆಗೆ 1,907 ಪ್ರಯಾಣಿಕರು ರೈಲುಗಳೊಳಗೆ ಆಹಾರ ಸೇವಿಸುತ್ತಿರುವಾಗ ಪತ್ತೆ ಮಾಡಿದ್ದಾರೆ. ಜತೆಗೆ ಹಲವರಿಗೆ ದಂಡ ವಿಧಿಸಲಾಗಿದೆ. ಇನ್ನು ರೈಲಿನ ಒಳಗಡೆ ಗುಟ್ಕಾ, ಪಾನ್ ಸೇರಿ ತಂಬಾಕು ಉತ್ಪನ್ನ ಸೇವನೆ ಮಾಡುತ್ತಿದ್ದ 1,677 ಜನರನ್ನು ಕಂಡು ಹಿಡಿದು ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಯಾವ್ಯಾವ ಪ್ರಕರಣಗಳು?- 57,538 ಪ್ರಯಾಣಿಕರು ಜೋರಾಗಿ ಹಾಡು ಕೇಳುವುದು ಪತ್ತೆ -37,038 ಪ್ರಯಾಣಿಕರಿಂದ ವೃದ್ಧರು,ಅಂಗವಿಕಲರ ಆಸನ ಅತಿಕ್ರಮಣ-1,907 ಪ್ರಯಾಣಿಕರಿಂದ ರೈಲುಗಳೊಳಗೆ ಆಹಾರ ಸೇವನೆ ಪತ್ತೆ-1,677 ಪ್ರಯಾಣಿಕರಿಂದ ಗುಟ್ಕಾ, ಪಾನ್ ಪದಾರ್ಥ ಸೇವನೆ