ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಗಮಂಗಲ ತಾಲೂಕು ಕಚೇರಿಯ ಭೂಮಿ ಮತ್ತು ದರಖಾಸ್ತು ಶಾಖೆಯ ದ್ವಿತೀಯ ದರ್ಜೆ ಸಹಾಯಕ ಎಚ್.ವಿ.ಸತೀಶ್, ಶಿರಸ್ತೇದಾರ್ ರವಿಶಂಕರ್, ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್.ಯೋಗೇಶ್, ರೆಕಾರ್ಡ್‌ರೂಂನ ಶಿರಸ್ತೇದಾರ್ ಉಮೇಶ್, ರೆಕಾರ್ಡ್‌ರೂಂ ಶಾಖೆಯ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಹಾಗೂ ಹಿಂದಿನ ಭೂಮಿ ಮತ್ತು ದರಖಾಸ್ತು ಶಾಖೆಯ ದ್ವಿತೀಯ ದರ್ಜೆ ಸಹಾಯಕ ವಿಜಯಕುಮಾರ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಬೇರೆ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೂಲ ಸರ್ಕಾರಿ ಭೂದಾಖಲೆಗಳನ್ನು ತಿದ್ದುಪಡಿ ಮಾಡಿ ನಕಲಿ ದಾಖಲೆ ಸೃಷ್ಟಿಸಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಕುರಿತು ದೂರು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡ ಕಳೆದ ಜ.೧೩ರಂದು ನಾಗಮಂಗಲ ತಾಲೂಕು ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ದಿಢೀರ್ ದಾಳಿ ನಡೆಸಿ ಸಮಗ್ರ ಪರಿಶೀಲನೆ ನಡೆಸಿದ್ದರು.ಈ ವೇಳೆ ತಾಲೂಕು ಕಚೇರಿಯ ದಾಖಲೆಗಳ ಕೊಠಡಿಯಲ್ಲಿರಬೇಕಾದ ಅಸಲು ಹಕ್ಕು ಬದಲಾವಣೆ ರಿಜಿಸ್ಟರ್ ಸೇರಿದಂತೆ ಕೆಲ ಮೂಲ ಭೂದಾಖಲೆಗಳು ತಾಲೂಕು ಕಚೇರಿಯ ಸಿಬ್ಬಂದಿಯ ಮನೆಗಳಲ್ಲಿ, ಜೆರಾಕ್ಸ್ ಅಂಗಡಿಯಲ್ಲಿ, ಇತರೆ ಖಾಸಗಿ ಅಂಗಡಿಯಲ್ಲಿ ಪತ್ತೆಯಾದರೆ, ಇನ್ನೂ ಹಲವು ದಾಖಲೆಗಳು ಹಾಗೂ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳ ನಕಲಿ ಸೀಲ್‌ಗಳು ಮೈಸೂರಿನ ರಾಜರತ್ನ ಹೋಟೆಲ್‌ನ ಕ್ಯಾಶ್‌ಕೌಂಟರ್ ಟೇಬಲ್‌ನಲ್ಲಿ ಪತ್ತೆಯಾಗಿದ್ದವು.
ಲೋಕಾಯುಕ್ತ ಪೊಲೀಸರಿಂದ ವಶಕ್ಕೆ ಪಡೆದಿದ್ದ ಎಲ್ಲಾ ಆರೋಪಿಗಳನ್ನು ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರು ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರೆದುರು ಹಾಜರು ಪಡಿಸಿ ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಎಲ್ಲಾ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡದೆ ೧೪ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರಿಸುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದ್ದರು.
ಕೆ.ಆರ್.ಪೇಟೆ ನ್ಯಾಯಾಲಯಕ್ಕೆ ಪ್ರಕರಣ ವರ್ಗ!
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಮಂಗಲ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸದಿರುವ ಅರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನೂರಾರು ಕೋಟಿ ರು. ಆರ್ಥಿಕ ಮೌಲ್ಯದ ಅಕ್ರಮ ಭೂಕಬಳಿಕೆ ಪ್ರಕರಣವನ್ನು ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.