;Resize=(412,232))
ಬೆಂಗಳೂರು : ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಉದ್ಯಮಿ ಪುತ್ರಿ ಹಾಗೂ ಆಕೆಯ ಸ್ನೇಹಿತನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿ ನಿವಾಸಿ ಮೇಘನಾ ಹಾಗೂ ಆಕೆಯ ಸ್ನೇಹಿತ ಆದಿತ್ಯ ಬಂಧಿತರಾಗಿದ್ದು, ಆರೋಪಿಗಳಿಂದ 4 ಕೆಜಿ ಗಾಂಜಾ, 37 ಗ್ರಾಂ ಎಡಿಎಂಎ, 35 ಗ್ರಾಂ ಹ್ಯಾಶಿಶ್ ಹಾಗೂ ಬೈಕ್ ಸೇರಿದಂತೆ 4 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ತರುಣ್ ಹಾಗೂ ದಿಲೀಪ್ ಸೇರಿ ಮೂವರ ಪತ್ತೆಗೆ ತನಿಖೆ ಮುಂದುವರಿದಿದೆ. ಇತ್ತೀಚೆಗೆ ಪೂರ್ಣಪ್ರಜ್ಞಾ ಲೇಔಟ್‌ನಲ್ಲಿ ಡ್ರಗ್ಸ್ ಮಾರಾಟದ ಬಗ್ಗೆ ಸಿಸಿಬಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ದಳಕ್ಕೆ ಬಾತ್ಮೀದಾರರ ಮೂಲಕ ಸುಳಿವು ಸಿಕ್ಕಿದೆ. ಕೂಡಲೇ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್‌ಗಳಾದ ಸುಬ್ರಹ್ಮಣ್ಯಪುರ ಠಾಣೆ ಎಂ.ಎಸ್.ರಾಜು ಹಾಗೂ ಸಿಸಿಬಿಯ ಜೆ.ಸಿ.ರಾಜು ನೇತೃತ್ವದ ತಂಡವು ದಾಳಿ ನಡೆಸಿದಾಗ ಪೆಡ್ಲರ್‌ಗಳು ಸೆರೆಯಾಗಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ವಿದ್ಯಾರ್ಥಿನಿ ಮೇಘನಾ, ಮೋಜು ಮಸ್ತಿಗೆ ಬಿದ್ದು ಹಾದಿ ತಪ್ಪಿದ್ದಾಳೆ. ಈಕೆಯ ತಂದೆ ಉದ್ಯಮಿ ಆಗಿದ್ದು, ಬನಶಂಕರಿ ಸಮೀಪ ಮೇಘನಾ ಕುಟುಂಬ ನೆಲೆಸಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿವಂತರು. ಆದರೆ ಅವರ ಕುಟುಂಬದ ಕುಡಿ ಮಾದಕ ವಸ್ತು ಮಾರಾಟ ಜಾಲಕ್ಕೆ ಸಿಲುಕಿದ ಪರಿಣಾಮ ಸಮಾಜದಲ್ಲಿ ತಲೆತಗ್ಗಿಸುವಂತಾಗಿದೆ.
ಮೊದಲು ತನ್ನ ಸ್ನೇಹಿತರ ಮೂಲಕ ಮಾದಕ ವಸ್ತು ವ್ಯಸನಿಯಾದ ಆಕೆ, ನಂತರ ಪೆಡ್ಲರ್ ಆಗಿ ರೂಪಾಂತರಗೊಂಡಿದ್ದಾಳೆ. ಅಂತೆಯೇ ತನ್ನ ಸ್ನೇಹಿತರಾದ ತರುಣ್ ಹಾಗೂ ದಿಲೀಪ್ ಸೂಚನೆ ಮೇರೆಗೆ ಮೇಘನಾ ಕೆಲಸ ಮಾಡುತ್ತಿದ್ದಳು. ತನ್ನ ಪ್ರಿಯಕರನ ಗೆಳೆಯ ಆದಿತ್ಯ ಜತೆಗೂಡಿ ಡ್ರಗ್ಸ್ ಪೂರೈಕೆಯಲ್ಲಿ ಆಕೆ ತೊಡಗಿದ್ದಳು. ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಈ ತಂಡ ದಂಧೆ ಮಾಡುತ್ತಿತ್ತು. ಗ್ರಾಹಕರು ಕಳುಹಿಸುವ ಲೋಕೇಷನ್‌ಗೆ ತೆರಳಿ ಆದಿತ್ಯ ಡ್ರಗ್ಸ್ ತಲುಪಿಸಿದರೆ, ಅವರಿಂದ ಆನ್‌ಲೈನ್ ಮೂಲಕ ಹಣವನ್ನು ಮೇಘನಾ ಸ್ವೀಕರಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಈ ಡ್ರಗ್ಸ್ ದಂದೆ ಬಗ್ಗೆ ಸಿಸಿಬಿಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ದಳಕ್ಕೆ ಮಾಹಿತಿ ಸಿಕ್ಕಿದೆ. ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾಳೆ. ತಪ್ಪಿಸಿಕೊಂಡಿರುವ ಇನ್ನುಳಿದ ಮೂವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರಕ್ಕೆ ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾಗ ಕೇರಳ ಮೂಲದ ವ್ಯಕ್ತಿಯೊಬ್ಬ ಜಾಲಹಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಡಾಲ್ವಿನಿ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ರು. ಮೌಲ್ಯದ 31 ಗ್ರಾಂ ಎಂಡಿಎಂಎ ಜಪ್ತಿಯಾಗಿದೆ. ಎರಡು ದಿನಗಳ ಹಿಂದೆ ಎಚ್‌ಎಂಟಿ ಕೈ ಗಡಿಯಾರ ಕಂಪನಿಯ ರೈಲ್ವೆ ಮೇಲ್ಸೇತುವೆ ಬಳಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಪೊಲೀಸರಿಗೆ ಆತ ಸೆರೆಯಾಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.