ಕಲ್ಯಾಣ ಮಂಟಪಗಳಿಗೆ ಆತಿಥಿ ಸೋಗಿನಲ್ಲಿ ತೆರಳಿ ಮದುವೆಗೆ ಬಂದ ಮಕ್ಕಳನ್ನು ಮಾತನಾಡಿಸುವಂತೆ ನಟಿಸಿ ಚಿನ್ನಾಭರಣ ಎಗರಿಸುತ್ತಿದ್ದ ಚಾಲಾಕಿ ಖದೀಮನೊಬ್ಬ ಸದಾಶಿವನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಲ್ಯಾಣ ಮಂಟಪಗಳಿಗೆ ಆತಿಥಿ ಸೋಗಿನಲ್ಲಿ ತೆರಳಿ ಮದುವೆಗೆ ಬಂದ ಮಕ್ಕಳನ್ನು ಮಾತನಾಡಿಸುವಂತೆ ನಟಿಸಿ ಚಿನ್ನಾಭರಣ ಎಗರಿಸುತ್ತಿದ್ದ ಚಾಲಾಕಿ ಖದೀಮನೊಬ್ಬ ಸದಾಶಿವನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಆಂದ್ರಹಳ್ಳಿಯ ಎಚ್.ಕೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತನಾಗಿದ್ದು, ಆರೋಪಿಯಿಂದ ನಾಲ್ಕು ಬೈಕ್, ಎರಡು ಲ್ಯಾಪ್‌ಟಾಪ್‌ಗಳು, ಮೊಬೈಲ್ ಹಾಗೂ 42.38 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಅರಮನೆ ಮೈದಾನದ ಬಳಿ ಶಂಕಾಸ್ಪದವಾಗಿ ಅಡ್ಡಾಡುತ್ತಿದ್ದ ಬಾಬುನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಮದುವೆ ಮನೆಯಲ್ಲಿ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳ್ಳನಾದ ಅಡುಗೆ ಭಟ್ಟತುಮಕೂರು ಜಿಲ್ಲೆಯ ಬಾಬು ವೃತ್ತಿಪರ ಕ್ರಿಮಿನಲ್ ಆಗಿದ್ದು, ನಗರದ ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳಿವೆ. 2007ರಲ್ಲಿ ಕಳ್ಳತನ ಪ್ರಕರಣದಲ್ಲಿ ಬಾಬುನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಹೀಗೆ ಹಲವು ಬಾರಿ ಜೈಲೂಟ ಸವಿದರೂ ಆತ ತನ್ನ ಚಾಳಿ ಬಿಟ್ಟಿರಲಿಲ್ಲ. ಮೂರು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದ ಬಳಿಕ ಪೊಲೀಸರ ಕೈಗೆ ಸಿಗದೆ ಬಾಬು ಓಡಾಡುತ್ತಿದ್ದ. ತನ್ನ ಪತಿ ಕಳ್ಳ ಎಂಬುದು ಗೊತ್ತಾಗಿ ಬಾಬು ಪತ್ನಿ ಪ್ರತ್ಯೇಕವಾಗಿದ್ದಾಳೆ.
ಈ ಮೊದಲು ಅಡುಗೆ ಭಟ್ಟನಾಗಿದ್ದ ಬಾಬು, ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಅಡ್ಡ ದಾರಿ ತುಳಿದಿದ್ದಾನೆ. ಮದುವೆಗಳಿಗೆ ತೆರಳಿ ಮಕ್ಕಳು ಧರಿಸುವ ಚಿನ್ನಾಭರಣಗಳನ್ನು ದೋಚುವುದು ಈತನ ಕೃತ್ಯವಾಗಿತ್ತು. ಮದುವೆಗೆ ಚಂದವಾಗಿ ಬಟ್ಟೆ ಧರಿಸಿ ಅತಿಥಿಯಂತೆ ಬಾಬು ಹೋಗುತ್ತಿದ್ದ. ಆಗ ಮದುವೆ ಸಂಭ್ರಮದಲ್ಲಿ ಮಕ್ಕಳನ್ನು ಮಾತನಾಡಿಸುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಆತ ಚಿನ್ನಾಭರಣ ಎಗರಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ಮಾ.7 ರಂದು ಅರಮನೆ ಮೈದಾನದಲ್ಲಿ ನಡೆದಿದ್ದ ಮದುವೆಯಲ್ಲಿ ತನ್ನ ಕೈಚಳಕ ತೋರಿಸಲು ಬಾಬು ಬಂದಿದ್ದಾನೆ. ಆ ವೇಳೆ ಅಲ್ಲಿ ಗಸ್ತಿನಲ್ಲಿದ್ದ ಪೊಲೀಸರು, ಬಾಬು ನಡವಳಿಕೆ ಮೇಲೆ ಶಂಕೆಗೊಂಡು ವಿಚಾರಿಸಿದ್ದಾರೆ. ಈ ವೇಳೆ ಏನೇನೋ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ‘ತೀವ್ರ’ವಾಗಿ ಪ್ರಶ್ನಿಸಿದಾಗ ಕಳ್ಳತನ ಸಂಗತಿ ಬೆಳಕಿಗೆ ಬಂದಿದೆ. ಈತನ ಬಂಧನದಿಂದ ಸದಾಶಿವನಗರದ 3, ಜಾಲಹಳ್ಳಿ ಹಾಗೂ ವರ್ತೂರು ಸೇರಿದಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂರು ಪ್ರಕರಣಗಳ ಮರುತನಿಖೆಗೆಕಳೆದ ವರ್ಷ ಅರಮನೆ ಮೈದಾನದಲ್ಲಿ ನಡೆದ ಮದುವೆಗಳಲ್ಲಿ ಮಕ್ಕಳ ಚಿನ್ನಾಭರಣ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಸಿಗದೆ ನ್ಯಾಯಾಲಯಕ್ಕೆ ಪೊಲೀಸರು ಮುಕ್ತಾಯದ ವರದಿ ಸಲ್ಲಿಸಿದ್ದರು. ಹೀಗೆ ತನಿಖೆಗೆ ಶುಭಂ ಹೇಳಿದ್ದ ಮೂರು ಪ್ರಕರಣಗಳ ಮರುತನಿಖೆಗೆ ನಿರ್ಧರಿಸಲಾಗಿದೆ. ಈ ಕೃತ್ಯಗಳಲ್ಲಿ ಬಾಬುನೇ ಆರೋಪಿ ಎಂಬ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-ಈಚೆಗೆ ಅರಮನೆ ಮೈದಾನದ ಬಳಿ ಶಂಕಾಸ್ಪದವಾಗಿ ಓಡಾಡುತ್ತಿದ್ದ ಆರೋಪಿ ವಶಕ್ಕೆ- ಪೊಲೀಸರ ವಿಚಾರಣೆಯಿಂದ ಮದುವೆ ಮನೆಗಳಲ್ಲಿ ಕಳ್ಳತನ ಕೃತ್ಯಗಳು ಬಯಲಾಗಿವೆ - ಆರೋಪಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ವಿವಿಧ ಠಾಣೆಗಳಲ್ಲಿ ಅನೇಕ ಪ್ರಕರಣ ದಾಖಲು- ಅಡುಗೆ ಭಟ್ಟನಾಗಿದ್ದ ಈತ ಸುಲಭ ಸಂಪಾದನೆಗೆ ಕಳ್ಳತನಕ್ಕಿಳಿದು ಜೈಲು ಅತಿಥಿಯೂ ಆಗಿದ್ದ