ಹೆಚ್ಚು ಹೆಚ್ಚು ಚಿನ್ನ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಆದರೆ ತೆರಿಗೆ ಕಿರಿಕಿರಿ ಇಲ್ಲದೇ ಎಷ್ಟು ಚಿನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದು ಎಂಬುದು ತಿಳಿದಿರುವುದಿಲ್ಲ. ಆ ಕುರಿತ ಮಾಹಿತಿ ಇಲ್ಲಿದೆ.
ಹೆಚ್ಚು ಹೆಚ್ಚು ಚಿನ್ನ ಖರೀದಿಸಬೇಕು ಎಂಬ ಆಸೆ ಇರುತ್ತದೆ. ಆದರೆ ತೆರಿಗೆ ಕಿರಿಕಿರಿ ಇಲ್ಲದೇ ಎಷ್ಟು ಚಿನ್ನ ಮನೆಯಲ್ಲಿ ಇಟ್ಟುಕೊಳ್ಳಬಹುದು ಎಂಬುದು ತಿಳಿದಿರುವುದಿಲ್ಲ. ಆ ಕುರಿತ ಮಾಹಿತಿ ಇಲ್ಲಿದೆ.
ಚಿನ್ನ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ. ಆದರೆ ಏರುವ ಮಟ್ಟಿಗೆ ಇಳಿಕೆ ಆಗಿಲ್ಲ. ಹೀಗಿರುವಾಗ ಆಭರಣವಾಗಿಯೂ, ಆಪದ್ಧನವಾಗಿಯೂ ಭಾರತೀಯ ಕುಟುಂಬಗಳನ್ನು ಕಾಯುವ ಚಿನ್ನವನ್ನು ಮನೆಯಲ್ಲಿ ಎಷ್ಟು ಇಟ್ಟುಕೊಳ್ಳಬಹುದು ಎಂಬ ಬಗ್ಗೆ ನಮ್ಮಲ್ಲೇ ಗೊಂದಲವಿದೆ.
- ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?
ಕಾನೂನಿನ ಪ್ರಕಾರ ಇಷ್ಟೇ ಚಿನ್ನ ಇಟ್ಟುಕೊಳ್ಳಬಹುದು ಎಂಬ ಗರಿಷ್ಠ ಮಿತಿ ಇಲ್ಲ. ಆದರೆ ನಿಮ್ಮ ಮೇಲೆ ಐಟಿ ದಾಳಿ ನಡೆದರೆ ಅಧಿಕಾರಿಗಳು ಆಧಾರ ಕೇಳುತ್ತಾರೆ. ಯಾವುದೇ ಡಾಕ್ಯುಮೆಂಟ್ ಇಲ್ಲದೆಯೂ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಈ ಕೆಳಗಿದೆ-
ವಿವಾಹಿತ ಮಹಿಳೆ - 500 ಗ್ರಾಂ
ಅವಿವಾಹಿತ ಮಹಿಳೆ - 250 ಗ್ರಾಂ
ಪುರುಷರು (ವಿವಾಹಿತ/ ಅವಿವಾಹಿತ) - 100 ಗ್ರಾಂ
ಈ ಲಿಮಿಟ್ ಒಳಗೆ ಚಿನ್ನ ಇದ್ದಾಗ, ಐಟಿ ರೈಡ್‌ನಲ್ಲಿ ಚಿನ್ನ ಎಷ್ಟಿದೆ ಎಂದು ದಾಖಲೆ ಮಾಡಿಕೊಳ್ಳುತ್ತಾರೆಯೇ ಹೊರತು ವಶಕ್ಕೆ ಪಡೆಯುವುದಿಲ್ಲ. ಉಳಿದಂತೆ ನೀವು ಎಷ್ಟೇ ಚಿನ್ನ ಇಟ್ಟುಕೊಂಡಿರಬಹುದು, ಅವುಗಳು ನಿಮ್ಮ ಬಳಿ ಹೇಗೆ ಬಂದವು ಎಂಬ ಕರಾರುವಾಕ್ಕಾದ ವಿವರ ನೀಡಬೇಕಾಗುತ್ತದೆ.
- ಗೋಲ್ಡ್ ಕಾಯಿನ್, ಬಾರ್‌ಗಳಿಗೆ ಇದು ಅನ್ವಯಿಸುತ್ತಾ?
ಖಂಡಿತಾ ಇಲ್ಲ. ಗರಿಷ್ಠ ಮಿತಿ ಇಲ್ಲದಿರುವುದು ಆಭರಣ ರೂಪದಲ್ಲಿರುವ ಚಿನ್ನಕ್ಕೆ ಮಾತ್ರ. ನೀವು ಗೋಲ್ಡ್ ಕಾಯಿನ್, ಗೋಲ್ಡ್ ಬಾರ್‌ಗಳು ಅಥವಾ ವಜ್ರದ ಆಭರಣ ಅಥವಾ ಬೇರೆ ಲೋಹಗಳಿಗೆ ಇದು ಅನ್ವಯವಾಗದು. ಇವಕ್ಕೆಲ್ಲ ಟ್ಯಾಕ್ಸ್ ಫ್ರೀ ಸಿಗೋದಿಲ್ಲ. ಒಂದಿಷ್ಟು ಸುಂಕ ಕಟ್ಟಿಯೇ ಇವುಗಳನ್ನು ಇಟ್ಟುಕೊಳ್ಳಬಹುದು.
- ಬಳುವಳಿಯಾಗಿ ಬರುವ ಬಂಗಾರ
ಉಡುಗೊರೆ ಆಭರಣಗಳು ಮತ್ತು ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬರುವ ಚಿನ್ನವನ್ನೆಲ್ಲ ಇಟ್ಟುಕೊಳ್ಳುವುದಕ್ಕೆ ಯಾರೂ ತಕರಾರು ತೆಗೆಯುವುದಿಲ್ಲ. ಆದರೆ ಟ್ಯಾಕ್ಸ್ ಕಟ್ಟುವ ವೇಳೆಗೆ ಇವುಗಳ ಬಗ್ಗೆ ವಿವರ ದಾಖಲಿಸಬೇಕಾದ್ದು ಅತ್ಯಗತ್ಯ. ನಾಳೆ ಏನಾದರೂ ಸಮಸ್ಯೆ ಆದರೂ ನೀವು ದಾಖಲೆ ಸಲ್ಲಿಸಿದ್ದೀರಿ ಎಂಬ ಅಧಿಕೃತತೆ ಇರುತ್ತದೆ.
ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ
- ಹೊಸದಾಗಿ ಚಿನ್ನ ತೆಗೆದುಕೊಂಡಿದ್ದರೆ ಬಿಲ್ ಅನ್ನು ಜೋಪಾನವಾಗಿ ಕಾಯ್ದಿರಿಸಿ.
- 2 ಲಕ್ಷ ರು. ಒಳಗಿನ ಚಿನ್ನವನ್ನು ನಗದು ನೀಡಿ ಖರೀದಿಸುವುದು ಜಾಣತನ. ಆದರೆ 2 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ನಗದು ನೀಡಿ ಖರೀದಿಸಲು ಈಗ ಕಾನೂನು ರೀತ್ಯಾ ಅವಕಾಶ ಇರುವುದಿಲ್ಲ.
- ಚಿನ್ನ ಎಷ್ಟು ಬೇಕಾದರೂ ಇಟ್ಟುಕೊಳ್ಳಿ, ಆದರೆ ದಾಖಲೆಗಳನ್ನು ಜತನವಾಗಿ ನೋಡಿಕೊಳ್ಳಿ.

