ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಹಣ ಹಾಗೂ ಚಿನ್ನ ಕದ್ದ ಮಹಿಳೆಯೊಬ್ಬಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಹಣ ಹಾಗೂ ಚಿನ್ನ ಕದ್ದ ಮಹಿಳೆಯೊಬ್ಬಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಳೆ.

ಕಾಕ್ಸ್ ಟೌನ್‌ ನಿವಾಸಿ ಧನಲಕ್ಷ್ಮೀ ಬಂಧಿತಳಾಗಿದ್ದು, ಆರೋಪಿಗಳಿಂದ 54 ಗ್ರಾಂ ಚಿನ್ನಾಭರಣ ಹಾಗೂ 8 ಲಕ್ಷ ರು. ನಗದು ಸೇರಿದಂತೆ 16 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕಳ್ಳತನದ ಬಗ್ಗೆ ಫ್ರೇಜರ್‌ ಟೌನ್‌ನಲ್ಲಿ ನೆಲೆಸಿರುವ ಖಾಸಗಿ ಕಂಪನಿ ಉದ್ಯೋಗಿ ದೂರು ನೀಡಿದ್ದರು. ಆಗ ಶಂಕೆ ಮೇರೆಗೆ ಮನೆ ಕೆಲಸದಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊನೆಗೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪುಲಿಕೇಶಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

25 ವರ್ಷಗಳಿಂದ ದೂರುದಾರರ ಅತ್ತೆ ಮನೆಯಲ್ಲಿ ಧನಲಕ್ಷ್ಮೀ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು ಮನೆ ಖರ್ಚಿಗೆ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬಂದು ಅವರ ಅತ್ತೆ-ಮಾವ ಇಟ್ಟುಕೊಳ್ಳುತ್ತಿದ್ದರು. ಈ ಸಂಗತಿ ತಿಳಿದಿದ್ದ ಮನೆ ಕೆಲಸದಾಳು, ಆ ಹಣದಲ್ಲಿ ಸ್ವಲ್ಪ ಸ್ವಲ್ಪವೇ ಕದಿಯುತ್ತಿದ್ದಳು. ಹೀಗೆ ಕೆಲ ತಿಂಗಳಿಂದ 14 ಲಕ್ಷ ರು. ನಗದು ಹಾಗೂ ಆಭರಣವನ್ನು ಧನಲಕ್ಷ್ಮೀ ಕಳವು ಮಾಡಿದ್ದಳು.

ಇತ್ತೀಚೆಗೆ ಈ ಕಳ್ಳತನ ಸಂಗತಿ ಮನೆ ಮಾಲಿಕರಿಗೆ ಗೊತ್ತಾಗಿದೆ. ಈ ಕಳ್ಳತನ ಬಗ್ಗೆ ವಿಚಾರಿಸಿದಾಗ ಆಕೆ ನಿರಾಕರಿಸಿದ್ದಳು. ಕೊನೆಗೆ ಪುಲಿಕೇಶಿನಗರ ಠಾಣೆಯಲ್ಲಿ ಅವರು ದೂರು ದಾಖಲಿಸಿದರು. ಆಗ ನೋಟಿಸ್ ನೀಡಿ ವಿಚಾರಣೆಗೆ ಕರೆದು ಆಕೆಯನ್ನು ಪ್ರಶ್ನಿಸಿದಾಗ ಸತ್ಯ ಬಯಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.