ನಕಲಿ ದಾಖಲೆ ಸೃಷ್ಟಿಸಿ 40 ಎಕರೆ ಜಮೀನು ಕಬಳಿಕೆ: ಕೇಸ್‌ ದಾಖಲು

KannadaprabhaNewsNetwork |  
Published : Jan 27, 2026, 03:00 AM IST
sheshadripuram | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ನಕಲಿ ವ್ಯಕ್ತಿ ಹಾಗೂ ದಾಖಲೆ ಸೃಷ್ಟಿಸಿ ವೃದ್ಧೆಯೊಬ್ಬರಿಗೆ ಸೇರಿದ 40 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ನಕಲಿ ವ್ಯಕ್ತಿ ಹಾಗೂ ದಾಖಲೆ ಸೃಷ್ಟಿಸಿ ವೃದ್ಧೆಯೊಬ್ಬರಿಗೆ ಸೇರಿದ 40 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿ ಐವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರಮಂಗಲದ ನಿವಾಸಿ ಮೈತ್ರೇಯಿ ರಾಮಚಂದ್ರ (70) ಮೋಸ ಹೋಗಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಧಾರವಾಡದ ಅಶ್ವಿನಿ, ಚಿತ್ರದುರ್ಗದ ನಿಂಗಪ್ಪ, ಭೀಮಾ ನಾಯಕ್‌, ಮಹಾಲಿಂಗಪ್ಪ ಹಾಗೂ ರಹೀಂಸಾಬ್‌ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಕೋಟ್ಯಂತರ ಮೌಲ್ಯದ ಆಸ್ತಿ ಬೇರೆಯವರಿಗೆ ಮಾರಾಟಕ್ಕೆ ಮೈತ್ರೇಯಿ ಅವರು ಮುಂದಾದಾಗ ಈ ಭೂ ಕಳಬಳಿಕೆ ಕೃತ್ಯ ಬೆಳಕಿಗೆ ಬಂದಿದೆ.

ಸ್ನೇಹಿತೆ ಮಾಡಿ ಧೋಖಾ:

ಹಲವು ವರ್ಷಗಳಿಂದ ಮೈತ್ರೇಯಿ ಅವರಿಗೆ ಧಾರವಾಡದ ಅಶ್ವಿನಿ ಜತೆ ಸ್ನೇಹವಿತ್ತು. ಈ ಗೆಳೆತನದಲ್ಲೇ ತಮ್ಮ ಆರ್ಥಿಕ ವ್ಯವಹಾರಗಳ ಬಗ್ಗೆ ಅವರು ಹೇಳಿಕೊಂಡಿದ್ದರು. ಆಗ ಅಜ್ಜಿ ಹೆಸರಿನಲ್ಲಿರುವ ಆಸ್ತಿ ಮೇಲೆ ಅಶ್ವಿನಿ ಕಣ್ಣು ಬಿದ್ದಿದೆ. ಚಿತ್ರದುರ್ಗ ಹಿರಿಯೂರು ತಾಲೂಕಿನ ಮಾಳಗೊಂಡನಹಳ್ಳಿ ಹಾಗೂ ಮಾವಿನಮಡು ಗ್ರಾಮದಲ್ಲಿ ಮೈತ್ರೇಯಿ ಅವರಿಗೆ 40.30 ಎಕರೆ ಜಮೀನಿದೆ. ಈ ಭೂಮಿಯನ್ನು ಅಶ್ವಿನಿ ಹಾಗೂ ಆಕೆಯ ಸ್ನೇಹಿತರು ನಕಲಿ ದಾಖಲೆ ಸೃಷ್ಟಿಸಿ ಕಬ್ಜ ಮಾಡಿದ್ದಾರೆ.

ಈ ಜಮಿನಿಗೆ ಸಂಬಂಧಿಸಿ ಬೆಂಗಳೂರಿನ ಗಾಂಧಿನಗರದಲ್ಲಿ ಖೋಟಾ ದಾಖಲೆಗಳನ್ನು ತಯಾರಿಸಿದ್ದಾರೆ. ಅಲ್ಲದೆ ಬೆಳಗಾವಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮೈತ್ರೇಯಿ ಅವರನ್ನೇ ಹೋಲುವಂತೆ ನಕಲಿ ಮಹಿಳೆಯನ್ನು ಕರೆದೊಯ್ದಿದ್ದಾರೆ. ಆ ನಕಲಿ ವ್ಯಕ್ತಿ ಮೂಲಕ ಜಮೀನು ಅಶ್ವಿನಿಗೆ ಜಿಪಿಎ ಮಾಡಿಕೊಟ್ಟಂತೆ ದಸ್ತಾವೇಜು ಮಾಡಿದ್ದಾರೆ. ದಾಖಲೆ ಸೃಷ್ಟಿಸಿದ್ದರು. ಅದೇ ದಾಖಲೆಯನ್ನು ಬಳಸಿ ಜಮಿನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಂಚನೆ ಬಗ್ಗೆ ಪ್ರಕರಣ ದಾಖಲಾದ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಆರೋಪಿಗಳಿಗೆ ಹುಡುಕಾಟ ಸಹ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಮದ್ಯದ ನಶೆಯಲ್ಲಿ ಹೊಡೆದಾಟ: ಮರಕ್ಕೆ ಕಾರು ಗುದ್ದಿಸಿ ಸ್ನೇಹಿತನ ಕೊಂದ ಟೆಕ್ಕಿ