ಚಲಿಸುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ: 10 ವರ್ಷದ ಬಾಲಕಿ ಸ್ಥಳದಲ್ಲೆ ಸಾವು

KannadaprabhaNewsNetwork |  
Published : Apr 14, 2025, 01:17 AM ISTUpdated : Apr 14, 2025, 04:33 AM IST
13ಕೆಎಂಎನ್ ಡಿ38 | Kannada Prabha

ಸಾರಾಂಶ

ಚಲಿಸುತ್ತಿದ್ದ ಲಾರಿಗೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ 10 ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಕ್ರಾಸ್‌ಬಳಿ ಭಾನುವಾರ ನಸುಕಿನ ವೇಳೆ ಸಂಭವಿಸಿದೆ.

 ನಾಗಮಂಗಲ : ಚಲಿಸುತ್ತಿದ್ದ ಲಾರಿಗೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿಯಾಗಿ 10 ವರ್ಷದ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡೇನಹಳ್ಳಿ ಕ್ರಾಸ್‌ಬಳಿ ಭಾನುವಾರ ನಸುಕಿನ ವೇಳೆ ಸಂಭವಿಸಿದೆ.

ವಿಜಯಪುರ ಜಿಲ್ಲೆ ಇಟಗಿ ಪಟ್ಟಣದ ಬಸವರಾಜು ಮತ್ತು ಜ್ಯೋತಿ ದಂಪತಿ ಪುತ್ರಿ ನವ್ಯ(10) ಮೃತಪಟ್ಟ ಬಾಲಕಿ. ಕಾರಿನಲ್ಲಿದ್ದ ಈಕೆಯ ತಂದೆ ತಾಯಿ ಸೇರಿದಂತೆ ಚಾಲಕ ಅಲ್ಲಾ ಭಕ್ಷಿಸ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೈಸೂರಿನಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದ ಗಾಯಾಳು ಜ್ಯೋತಿ ಅವರ ಸಹೋದರಿ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಕುಟುಂಬಸ್ಥರು ವಿಜಯಪುರ ಜಿಲ್ಲೆ ಇಟಗಿ ಪಟ್ಟಣದಿಂದ ತಮ್ಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ನಾಗಮಂಗಲ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ತಾಲೂಕಿನ ಗುಡ್ಡೇನಹಳ್ಳಿ ಕ್ರಾಸ್ ಬಳಿ ಭಾನುವಾರ ನಸುಕಿನ 4 ಗಂಟೆ ಸಮಯದಲ್ಲಿ ನಿದ್ರೆ ಮಂಪರಿನಲ್ಲಿದ್ದ ಕಾರು ಚಾಲಕ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಢ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮುಂಬದಿ ಹೋಗುತ್ತಿದ್ದ ಲಾರಿ ನಿಲ್ಲಿಸದೆ ಹೊರಟು ಹೋಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟು ಬಾಲಕಿ ನವ್ಯಳ ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಮಂಡ್ಯ: ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕು ಬ್ಯಾಡರಹಳ್ಳಿ-ಯಲಿಯೂರು ರೈಲು ನಿಲ್ದಾಣಗಳ ಮಧ್ಯೆ ನಡೆದಿದೆ. ಮೃತ ವ್ಯಕ್ತಿಗೆ ಸುಮಾರು 45 ವರ್ಷವಾಗಿದೆ. 5.6 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಶರೀರ, ದಪ್ಪನೆ ಮೂಗು, ದುಂಡನೇಯ ಮುಖ, ತಲೆಯಲ್ಲಿ ಸುಮಾರು 1 ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲು, ಮೀಸೆ, ದಾಡಿ ಶೇವ್ ಮಾಡಿರುತ್ತಾನೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ತುಂಬು ತೋಳಿ ಕಡು ನೀಲಿ ಬಣ್ಣದ ಟೀ ಶರ್ಟ್, ಹಸಿರು ಬಣ್ಣದ ಅಂಡರ್ ವೇರ್ ಧರಿಸಿರುತ್ತಾರೆ. ಈತನ ವಾರಸುದಾರರು ಇದ್ದಲ್ಲಿ ತಕ್ಷಣ ರೈಲ್ವೆ ಪೊಲೀಸರು ದೂ-821-2516579, ಮೊ-9480802122 ಸಂಪರ್ಕಿಸಲು ಕೋರಲಾಗಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!