ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ* ಪ್ರಕರಣ ಸಂಬಂಧ ಬಹುನಿರೀಕ್ಷಿತ ತೀರ್ಪನ್ನು ಆ.1ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುಂದೂಡಿದೆ.
ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿತ್ತು. ಸಿಐಡಿ ಎಸ್‌ಐಟಿ ತನಿಖಾಧಿಕಾರಿ, ಆರೋಪಿ ಪ್ರಜ್ವಲ್ ರೇವಣ್ಣ ಪರ ವಕೀಲರಿಂದ ಸ್ಪಷ್ಟನೆಗೆ ಸೂಚಿಸಿದ ನ್ಯಾಯಾಲಯವು ಅಂತಿಮ ತೀರ್ಪನ್ನು ಆ.1ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ಅಂತಿಮ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ತನಿಖಾಧಿಕಾರಿ ಘಟನಾ ಸ್ಥಳ ತೋರಿಸಲು ಬಳಸಿರುವ ಗೂಗಲ್ ಮ್ಯಾಪ್ ಅನ್ನು ಸಾಕ್ಷಿಯಾಗಿ ಪರಿಗಣಿಸಬಹುದೇ ಮತ್ತು ಆರೋಪಿಯಿಂದ ಜಪ್ತಿ ಮಾಡಿರುವ ಸ್ಯಾಮ್‌ಸಂಗ್ ಮೊಬೈಲ್ ಕುರಿತು ಕೆಲ ವಿವರಣೆ ನೀಡುವಂತೆ ಎಸ್‌ಐಟಿ ತನಿಖಾಧಿಕಾರಿ ಮತ್ತು ಆರೋಪಿ ಪ್ರಜ್ವಲ್ ಪರ ವಕೀಲರಿಗೆ ಸೂಚಿಸಿದರು.