ರೌಡಿ ಬಿಕ್ಲು ಶಿವ ಕೊಲೆ: ಎಫ್ಐಆರ್ ರದ್ದು ಕೋರಿದ ಅರ್ಜಿ ವಿಚಾರಣೆ ಮುಂದಕ್ಕೆ

KannadaprabhaNewsNetwork |  
Published : Jul 31, 2025, 01:48 AM ISTUpdated : Jul 31, 2025, 09:50 AM IST
Biklu SHiva Murder_Bengaluru

ಸಾರಾಂಶ

ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಕುರಿತು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಲು ಕೋರಿ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಾಲ್ಕು ವಾರ ಮುಂದೂಡಿತು.

  ಬೆಂಗಳೂರು :  ರೌಡಿಶೀಟರ್‌ ಶಿವಪ್ರಕಾಶ್‌ ಅಲಿಯಾಸ್‌ ಬಿಕ್ಲು ಶಿವ ಹತ್ಯೆ ಪ್ರಕರಣ ಕುರಿತು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಲು ಕೋರಿ ಕೆ.ಆರ್‌.ಪುರ ಶಾಸಕ ಬೈರತಿ ಬಸವರಾಜ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಾಲ್ಕು ವಾರ ಮುಂದೂಡಿತು.

ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಪ್ರಕರಣದ ಐದನೇ ಆರೋಪಿಯಾಗಿರುವ ಬೈರತಿ ಬಸವರಾಜ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ, ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಬೈರತಿ ಬಸವರಾಜ್‌ ಪರ ವಕೀಲರು ಹಾಜರಾಗಿ, ಪ್ರಕರಣದಲ್ಲಿ ಅರ್ಜಿದಾರರು ಐದನೇ ಆರೋಪಿಯಾಗಿದ್ದಾರೆ. ದೂರುದಾರಗಿರುವ ಮೃತನ ತಾಯಿಯು ತಾನು ಪೊಲೀಸರಿಗೆ ಬೈರತಿ ಬಸವರಾಜ್‌ ಅವರ ಹೆಸರು ಹೇಳಿಲ್ಲ ಎಂದು ತಿಳಿಸಿದ್ದಾರೆ. ಹೀಗಿದ್ದರೂ ಅರ್ಜಿದಾರರ ವಿರುದ್ಧದ ಎಫ್‌ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ಪೊಲೀಸರು ಎರಡು ಬಾರಿಗೆ ನೋಟಿಸ್‌ ಜಾರಿ ಮಾಡಿದ್ದರು. ಅದರಂತೆ ಎರಡು ಬಾರಿಯೂ ವಿಚಾರಣೆಗೆ ಹಾಜರಾಗಿ ಅರ್ಜಿದಾರರು ಸಹಕಾರ ನೀಡಿದ್ದಾರೆ. ಪೊಲೀಸರು ಬಲವಂತದ ಕ್ರಮ ಜರುಗಿಸಿಲ್ಲ. ಪೊಲೀಸರ ವಿಚಾರಣೆ ಕರೆದರೆ ಅರ್ಜಿದಾರರು ಹಾಜರಾಗುತ್ತಾರೆ. ಹೀಗಾಗಿ, ವಿಚಾರಣೆಯನ್ನು ಮುಂದೂಡಬೇಕು ಎಂದು ತಿಳಿಸಿದರು.

ಸರ್ಕಾರಿ ವಕೀಲರು ಸಹ ಅರ್ಜಿದಾರರು ತನಿಖೆಗೆ ಸಹಕರಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.

ಕಾನೂನು ಪ್ರಕಾರ ತನಿಖೆ ನಡೆಯಲಿದೆ. ತನಿಖೆಗೆ ಕರೆದರೆ ಅರ್ಜಿದಾರರು ಹಾಜರಾಗಲಿ. ಈ ವೇಳೆ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್‌ (3)(4)(5) ಮತ್ತು ಅರ್ನೇಶ್‌ ಕುಮಾರ್‌, ಗೋಸ್ವಾಮಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪಿನ ನಿರ್ದೇಶನಗಳನ್ನು ತನಿಖಾಧಿಕಾರಿಗಳು ಪಾಲಿಸಬೇಕು ಎಂದು ನಿರ್ದೇಶನ ನೀಡಿ ಜು.18ರಂದು ಹೊರಡಿಸಿದ ಮಧ್ಯಂತರ ಆದೇಶವನ್ನು ನ್ಯಾಯಪೀಠ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

PREV
Read more Articles on

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ