ಆಂಧ್ರದಿಂದ ಗಾಂಜಾ ತಂದು ಹಂಚುತ್ತಿದ್ದ ಗ್ಯಾಂಗ್ ಬಂಧನ

KannadaprabhaNewsNetwork |  
Published : Jul 30, 2025, 02:02 AM IST
Deepak Kumar | Kannada Prabha

ಸಾರಾಂಶ

ಆಂಧ್ರದಿಂದ ಗಾಂಜಾ ತಂದು ಆಟೋದಲ್ಲಿ ಸಾಗಿಸುವಾಗ ಗ್ಯಾಂಗ್‌ ಸಿಕ್ಕಿಬಿದ್ದಿದೆ. ಅಲ್ಲದೆ ಅವರು ಕೊರಿಯರ್ ಮೂಲಕ ಗಾಂಜಾ ಸಾಗಿಸುತ್ತಿದ್ದ ಸಂಗತಿ ಬಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಸಿ ಸಿದ್ಧ ಉಡುಪು ನೆಪದಲ್ಲಿ ಹೊರ ರಾಜ್ಯದಿಂದ ಗಾಂಜಾ ತಂದು ಬಳಿಕ ದೇಶದ ಇತರೆ ನಗರಗಳಿಗೆ ಕೊರಿಯರ್ ಮೂಲಕ ಪೂರೈಸುತ್ತಿದ್ದ ಗ್ಯಾಂಗ್‌ವೊಂದನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ದೀಪಕ್ ಕುಮಾರ್ ಅಲಿಯಾಸ್ ದೀಪಕ್ ಮೆಹ್ತಾ, ಅಮರನಾಥ್‌ ಜೈಸ್ವಾಲ್‌ ಅಲಿಯಾಸ್ ಮಿಶ್ರಾ, ರಾಜಸ್ಥಾನದ ಶಂಕರ್ ಲಾಲ್ ಅಲಿಯಾಸ್ ಅಜಯ್‌, ಒಡಿಶಾದ ಅನಿರುದ್ಧ್ ದಲೈ ಅಲಿಯಾಸ್ ಸೋನು, ಜಾರ್ಖಂಡ್‌ನ ಬಸಂತ್ ಕುಮಾರ್‌ ಹಾಗೂ ಅಜಿತ್ ಕುಮಾರ್ ಸಿಂಗ್ ಅಲಿಯಾಸ್ ವಿಫುಲ್ ಬಾಯ್ ಬಂಧಿತರು. ಆರೋಪಿಗಳಿಂದ 53.5 ಕೆಜಿ ಗಾಂಜಾ, 9 ಮೊಬೈಲ್‌, 10 ಸಿಮ್ ಕಾರ್ಡ್‌ಗಳು, ಲ್ಯಾಪ್‌ಟಾಪ್ ಹಾಗೂ ಸರಕು ಸಾಗಾಣೆ ಆಟೋ ಸೇರಿ 42 ಲಕ್ಷ ರು. ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಕಾಟನ್‌ಪೇಟೆಯ ಪಶುವೈದ್ಯ ಆಸ್ಪತ್ರೆ ಸಮೀಪ ಗೂಡ್ಸ್ ಆಟೋದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಇ.ಯರ್ರಿಸ್ವಾಮಿ ನೇತೃತ್ವದ ದಾಳಿ ನಡೆಸಿದೆ.

ಗಾಂಜಾ ಮಾರಾಟ ದಂಧೆ ಹೇಗೆ?

ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದಿಂದ ಬಸ್ ಹಾಗೂ ಕಾರ್ಗೋ ಸೇವೆಗಳ ಮೂಲಕ ಬೆಂಗಳೂರಿಗೆ ಗಾಂಜಾ ಸಾಗಿಸಿ ಬಳಿಕ ಇಲ್ಲಿಂದ ದೆಹಲಿ, ಪುಣೆ ಹಾಗೂ ಹೈದರಾಬಾದ್ ಸೇರಿ ಇತರೆಡೆಗೆ ಆರೋಪಿಗಳು ಗಾಂಜಾವನ್ನು ಪೂರೈಸುತ್ತಿದ್ದರು. ಇದಕ್ಕಾಗಿ ನಕಲಿ ಜಿಎಸ್‌ಟಿ ಬಿಲ್‌ಗಳನ್ನು ದಂಧೆಕೋರರು ಸೃಷ್ಟಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಆರೋಪಿಗಳ ಪೈಕಿ ಬಹುತೇಕರಿಗೆ ಕೊರಿಯರ್ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಅನುಭವವಿತ್ತು. ಇದೇ ಕೊರಿಯರ್ ಕಂಪನಿಗಳ ಮೂಲಕ ಅವರೆಲ್ಲ ಪರಸ್ಪರ ಪರಿಚಿತರಾಗಿ ಗಾಂಜಾ ಮಾರಾಟಕ್ಕೆ ಸಂಘಟಿತವಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಬಂಧನಕ್ಕೂ ಮುನ್ನ ಸಹ ದೆಹಲಿಯಲ್ಲಿ ಕಾರ್ಗೋ ಕಂಪನಿಯಲ್ಲಿ ಬಿಹಾರ ಮೂಲದ ದೀಪಕ್ ನೌಕರಿಯಲ್ಲಿದ್ದ. ಹಾಗಾಗಿ ಗಾಂಜಾ ಸಾಗಾಣಿಕೆಗೆ ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಯಲ್ಲಿ ಆತನ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಲಾಗಿದೆ.

ದೆಹಲಿಯಲ್ಲಿ ತನ್ನ ಕಂಪನಿಯ ಅಸಲಿ ಬಿಲ್ ಅನ್ನು ತನ್ನ ಸ್ನೇಹಿತರಿಗೆ ದೀಪಕ್ ಕಳುಹಿಸುತ್ತಿದ್ದ. ಬಳಿಕ ಆ ಬಿಲ್‌ಗೆ ನಕಲಿ ಬಿಲ್ ಸೃಷ್ಟಿಸಿ ಸಿದ್ಧಉಡುಪು ಎಂದು ಹೇಳಿ ಗಾಂಜಾವನ್ನು ಬೆಂಗಳೂರಿನಿಂದ ಬೇರೆ ನಗರಗಳಿಗೆ ಆರೋಪಿಗಳು ಕಳುಹಿಸುತ್ತಿದ್ದರು. ಈ ಜಾಲದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾಟನ್‌ಪೇಟೆಯ ಪಶು ಆಸ್ಪತ್ರೆ ಬಳಿ ಆಟೋದಲ್ಲಿ ಗಾಂಜಾ ತುಂಬಿಕೊಂಡು ಹೋಗುವಾಗ ದಾಳಿ ನಡೆಸಿ ರಾಜಸ್ಥಾನದ ಶಂಕರ್ ಲಾಲ್ ಅಲಿಯಾಸ್ ಅಜಯ್‌ ಹಾಗೂ ಒಡಿಶಾದ ಅನಿರುದ್ಧ್ ದಲೈನನ್ನು ಬಂಧಿಸಿದರು. ಬಳಿಕ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇನ್ನುಳಿದವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಆರೋಪಿಗಳ ಬಂಧನಕ್ಕೆ ದೆಹಲಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಜಾರ್ಖಂಡ್‌ ರಾಜ್ಯದ ಪೊಲೀಸರು ಹಾಗೂ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6 ತಿಂಗಳಿಂದ ಕಾರ್ಯಾಚರಣೆ

ಕಳೆದ ಆರೇಳು ತಿಂಗಳಿಂದ ಈ ಜಾಲವು ಗಾಂಜಾ ಸಾಗಾಣಿಕೆ ಕಾರ್ಯಾಚರಣೆ ನಡೆಸಿದ ಬಗ್ಗೆ ಮಾಹಿತಿ ಇದೆ. ಈ ಜಾಲದ ಶೋಧನಾ ಕಾರ್ಯ ಮುಂದುವರಿದಿದ್ದು, ಮತ್ತಷ್ಟು ಗಾಂಜಾ ಜಪ್ತಿಯಾಗಬಹುದು. ಈ ಆರೋಪಿಗಳ ಪೈಕಿ ಬಿಹಾರದ ಅಮರನಾಥ್ ಜೈಸ್ವಾಲ್ ವಿರುದ್ಧ ಈ ಹಿಂದೆ ಬಿಹಾರದಲ್ಲಿ ಗಾಂಜಾ ಪ್ರಕರಣ ದಾಖಲಾಗಿತ್ತು. ಇನ್ನುಳಿದವರು ಇದೇ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ