ಕನ್ನಡಪ್ರಭ ವಾರ್ತೆ ಬೆಂಗಳೂರು
ಬೈರತಿ ನಿವಾಸಿಗಳಾದ ಸಚಿತಾ, ಆಕೆಯ ಪ್ರಿಯಕರ ಯಶವಂತ್, ಸ್ನೇಹಿತರಾದ ತನುಷ್, ಎಲ್‌ಎಲ್‌ಬಿ ವಿದ್ಯಾರ್ಥಿ ರಾಮ್ ಪ್ರಕಾಶ್ ಬಂಧಿತರಾಗಿದ್ದು, ಆರೋಪಿಗಳಿಂದ 65 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ರು. ನಗದು ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಮನೆಯ ಲಾಕರ್‌ನಲ್ಲಿಟ್ಟಿದ್ದ ಒಂದು ಕೆಜಿ ಆಭರಣ ಕಳ್ಳತನವಾಗಿದೆ ಎಂದು ಕೊತ್ತನೂರು ಪೊಲೀಸರಿಗೆ ಸಚಿತಾ ಚಿಕ್ಕಪ್ಪ ಬಿ.ಎನ್.ಶ್ರೀನಿವಾಸ್ ದೂರು ಕೊಟ್ಟಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಸಚಿತಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊನೆಗೆ ಚಿನ್ನದ ಕಳ್ಳತನ ಬಯಲಾಗಿದೆ.
ವಿದ್ಯಾರ್ಥಿಗಳ ಮೋಜಿನ ಜೀವನಖಾಸಗಿ ಕಾಲೇಜಿನಲ್ಲಿ ಸಚಿತಾ, ತನುಷ್ ಹಾಗೂ ಯಶವಂತ್ ಪದವಿ ವಿದ್ಯಾರ್ಥಿಗಳಾಗಿದ್ದರೆ, ರಾಮ್ ಪ್ರಸಾದ್ ಎಲ್‌ಎಲ್‌ಬಿ ಓದುತ್ತಿದ್ದ. ಮೋಜಿನ ಜೀವನಕ್ಕೆ ವ್ಯಾಮೋಹಗೊಂಡ ಈ ವಿದ್ಯಾರ್ಥಿಗಳು ತಮ್ಮ ಶೋಕಿಗೆ ಹಣಕ್ಕೆ ಪರದಾಡುತ್ತಿದ್ದರು. ಆಗ ಸಚಿತಾಳ ಚಿಕ್ಕಪ್ಪ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದಿದ್ದ ಆಕೆಯ ಪ್ರಿಯಕರ ಯಶವಂತ್, ಚಿಕ್ಕಪ್ಪನ ಮನೆಯಲ್ಲಿ ಚಿನ್ನ ಹಾಗೂ ಹಣ ಕಳ್ಳತನಕ್ಕೆ ಪ್ರಚೋದನೆ ನೀಡಿದ್ದ. ಕೊನೆಗೆ ಪ್ರಿಯಕರನ ಮಾತಿಗೆ ಮರುಳಾಗಿ ಆಕೆ ಕಳ್ಳತನಕ್ಕಿಳಿದಿದ್ದಳು ಎನ್ನಲಾಗಿದೆ.
ಈ ಅನುಮಾನ ಹಿನ್ನೆಲೆಯಲ್ಲಿ ಶ್ರೀನಿವಾಸ್ ಮನೆಯ ಕೆಲಸಗಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ದೋಷಮುಕ್ತರಾದರು. ಆಗ ದೂರುದಾರರ ಮನೆಗೆ ಬಂದು ಹೋಗುವವರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದರು. ಈ ವೇಳೆ ಸಚಿತಾಳ ನಡವಳಿಕೆ ಮೇಲೆ ಪೊಲೀಸರಿಗೆ ಗುಮಾನಿ ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.
ಕಳ್ಳತನದ ಹಣದಲ್ಲಿ ಗೋವಾಕ್ಕೆ ಹೋಗಿ ಸಚಿತಾಳ ಸ್ನೇಹಿತರು ಮೋಜು ಮಸ್ತಿ ಮಾಡಿದ್ದರು. ಚಿನ್ನದ ವಿಲೇವಾರಿಯಲ್ಲಿ ಯಶವಂತ್‌ಗೆ ಆತನ ಸ್ನೇಹಿತರ ನೆರವು ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.