ಲಕ್ಷಾಂತರ ಮೌಲ್ಯದ ರು. ಚಿನ್ನಾಭರಣ ಲೂಟಿ: ಬಾಲಕ ಸೇರಿ ಇಬ್ಬರ ಬಂಧನ

KannadaprabhaNewsNetwork |  
Published : Jun 27, 2024, 01:01 AM ISTUpdated : Jun 27, 2024, 04:39 AM IST
Robbery

ಸಾರಾಂಶ

 ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುದುರೆಗುಂಡಿ ಗ್ರಾಮದ ಎಂ. ಸಿ. ಸತೀಶನ ಪತ್ನಿ ಕೆ.ಜೆ. ಚೇತನರ ಕೈಲಿದ್ದ ಹ್ಯಾಂಡ್ ಬ್ಯಾಗ್ ಕಸಿದು ಅದರಲ್ಲಿದ್ದ ನಗದು ಹಾಗೂ ಚಿನ್ನಾಭರಣ ಸಮೇತ ಪರಾರಿಯಾಗಿದ್ದರು.

 ಮದ್ದೂರು : ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಕಳೆದ ಜೂ.30ರಂದು ಹಾಡಹಗಲೇ ಗೃಹಿಣಿಯ ಹ್ಯಾಂಡ್ ಬ್ಯಾಗ್ ಕಸಿದು ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಓರ್ವ ಬಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ನಗರದ ಹಾಲಹಳ್ಳಿ ಬಡಾವಣೆಯ ಶ್ರೀಕಂಠ ಪುತ್ರ ಶಶಿಕುಮಾರ್ (20) ಹಾಗೂ ಮಂಡ್ಯ ತಾಲೂಕು ಗೊರವಾಲೆ ಗ್ರಾಮದ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಬಂಧಿತರಿಂದ 1.50 ಲಕ್ಷ ರು. ಮೌಲ್ಯದ 25 ಗ್ರಾಂ ಚಿನ್ನದ ನಕ್ಲೇಸ್, 12 ಗ್ರಾಂ ತೂಕದ ಕಿವಿಯೋಲೆ, ಜುಮುಕಿ ಹಾಗೂ ಕೃತ್ಯಕ್ಕೆ ಬಳಸಿದ್ದ ಹೀರೋ ಹೋಂಡಾ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಶಶಿಕುಮಾರ್ ಮೂಲತಃ ಮಳವಳ್ಳಿ ಪಟ್ಟಣದ ನಿವಾಸಿಯಾಗಿದ್ದು ಹಾಲಿ ಮಂಡ್ಯದ ಹಾಲಹಳ್ಳಿ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದನು.

ಆರೋಪಿ ಶಶಿಕುಮಾರ್ ಕಳೆದ ಮೇ 30 ರಂದು ಸಂಜೆ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನೊಂದಿಗೆ ಬೈಕಿನಲ್ಲಿ ಬಂದು ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಕುದುರೆಗುಂಡಿ ಗ್ರಾಮದ ಎಂ. ಸಿ. ಸತೀಶನ ಪತ್ನಿ ಕೆ.ಜೆ. ಚೇತನರ ಕೈಲಿದ್ದ ಹ್ಯಾಂಡ್ ಬ್ಯಾಗ್ ಕಸಿದು ಅದರಲ್ಲಿದ್ದ ನಗದು ಹಾಗೂ ಚಿನ್ನಾಭರಣ ಸಮೇತ ಪರಾರಿಯಾಗಿದ್ದರು.

ಈ ಸಂಬಂಧ ಚೇತನ ಮದ್ದೂರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಮಂಡ್ಯ ಎಸ್ಪಿ ಎನ್. ಯತೀಶ್, ಎಎಸ್ಪಿಗಳಾದ ತಿಮ್ಮಯ್ಯ, ಗಂಗಾಧರ ಸ್ವಾಮಿ, ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶಿವಕುಮಾರ್, ವೆಂಕಟೇಗೌಡ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.

ನಂತರ ಕಾರ್ಯಾಚರಣೆ ನಡೆಸಿದ ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಸಿಬ್ಬಂದಿಗಳಾದ ಗುರುಪ್ರಸಾದ್, ವಿಷ್ಣುವರ್ಧನ್, ಪ್ರಭುಸ್ವಾಮಿ, ಚಿರಂಜೀವಿ, ಮಹೇಶ್ ಅವರುಗಳು ಮದ್ದೂರಿನ ಕೊಲ್ಲಿ ಸರ್ಕಲ್ ಬಳಿ ಅನುಮಾನಾಸ್ಪದವಾಗಿ ಓಡಾಡಿಕೊಂಡು ಮತ್ತೊಂದು ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದಾಗ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಗೃಹಿಣಿಯ ಹ್ಯಾಂಡ್ ಬ್ಯಾಗ್ ಕುಸಿದು ಚಿನ್ನಾಭರಣ ದೋಚಿದ ಪ್ರಕರಣ ಬೆಳಕಿಗೆ ಬಂದಿದೆ.

ಸದರಿ ಆರೋಪಿಗಳು ಮಂಡ್ಯ ವೆಸ್ಟ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳನ್ನು ಕಳವು ಮಾಡಿದ ಪ್ರಕರಣದಲ್ಲೂ ಭಾಗಿಯಾಗಿರುವುದು ಪೊಲೀಸರ ವಿಚಾರಣೆ ಕಾಲದಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಶಶಿಕುಮಾರ್ ನನ್ನು ಮದ್ದೂರು ಜೆಎಂಎಫ್‌ಸಿ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್.ವಿ.ಕೊನಪ್ಪ ಅವರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನನ್ನು ಮೈಸೂರು ಬಾಲ ಮಂದಿರದ ವಶಕ್ಕೆ ನೀಡಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸರಗಳ್ಳರ ಬಂಧನ: ೨೫೩ ಗ್ರಾಂ ಚಿನ್ನ, ೧೭೮ ಗ್ರಾಂ ಬೆಳ್ಳಿ ಆಭರಣ ವಶ
ಕಿಲ್ಲರ್‌ ಡಾಕ್ಟರ್‌ಗೆ 10 ವೈದ್ಯೆಯರ ಜತೆ ಸಲುಗೆ