ಮೈಸೂರು ಮೂಲದ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆ ಪೊಲೀಸರು ೨೫೩ ಗ್ರಾಂ ಚಿನ್ನ, ೧೭ ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಸೂರು ಮೂಲದ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆ ಪೊಲೀಸರು ೨೫೩ ಗ್ರಾಂ ಚಿನ್ನ, ೧೭ ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ಒಂದು ಪಲ್ಸರ್ ಬೈಕ್ ಮತ್ತು ಆಕ್ಸಿಸ್ ಬೈಕ್‌ನ್ನೂ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ೩೧.೯೮ ಲಕ್ಷ ರು. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.ಮೈಸೂರಿನ ಶಾಂತಿನಗರ ಒಂದನೇ ಕ್ರಾಸ್ ನಿವಾಸಿ ಸದ್ದಾಂ ಹುಸೇನ್ ಅಲಿಯಾಸ್ ಸದ್ದಾಂ (೩೨) ಹಾಗೂ ರಾಜೀವ್ ನಗರದ ಹಲ್‌ಬಾಲ್ ಮಸೀದಿ ಸಮೀಪ ನಿವಾಸಿ ಸೈಯದ್ ಅಯೂಬ್ (೩೨) ಬಂಧಿತ ಆರೋಪಿಗಳು. ಸದ್ದಾಂ ಹುಸೇನ್ ಮೈಸೂರಿನಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದರೆ, ಸೈಯದ್ ಅಯೂಬ್ ವಿರುದ್ಧ ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ೩೮ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.
ಸೈಯದ್ ಅಯೂಬ್ ೧೬ ಜುಲೈ ೨೦೨೫ರಂದು ಮೈಸೂರು ಜೈಲಿನಿಂದ ಬಿಡುಗಡೆಯಾದ ನಂತರದಲ್ಲಿ ಜಿಲ್ಲೆಯ ಕಿರುಗಾವಲು, ಮಳವಳ್ಳಿ, ಮೈಸೂರು ಹಾಗೂ ದಾವಣಗೆರೆ ಸೇರಿ ಒಟ್ಟು ಎಂಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವಿವರಿಸಿದರು.ಆರೋಪಿಗಳಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದು, ತಾವು ಕದ್ದ ಮಾಲನ್ನು ಬೇರೆಯವರ ಬಳಿ ಅಡಮಾನ ಮಾಡಿದ್ದರು. ಮೈಸೂರಿನಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಅಡವಿಟ್ಟಿದ್ದ ಚಿನ್ನ-ಬೆಳ್ಳಿ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಡಿವೈಎಸ್ಪಿ ಯಶವಂತ್‌ಕುಮಾರ್, ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್, ಕಿರುಗಾವಲು ಪಿಎಸ್‌ಐ ಡಿ.ರವಿಕುಮಾರ್, ಸಿಬ್ಬಂದಿ ರಿಯಾಜ್‌ಪಾಷ, ಪ್ರಭುಸ್ವಾಮಿ, ಸಿದ್ದರಾಜು, ಶ್ರೀನಿವಾಸ್, ಮಧುಕಿರಣ್ ಇತರರಿದ್ದರು.