ಡಿ ಗ್ಯಾಂಗ್‌ ವಿರುದ್ಧ ಈ ವಾರ ಚಾರ್ಜ್‌ಶೀಟ್‌? - ರೇಣುಕಾಸ್ವಾಮಿ ಕೊಲೆ ಕೇಸ್‌ ತನಿಖೆ ಬಹುತೇಕ ಪೂರ್ಣ

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಈ ವಾರದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ಬೆಂಗಳೂರು  :  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಈ ವಾರದೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆಯಿದೆ.

ತನಿಖಾ ತಂಡವು ಪ್ರಕರಣದ ತನಿಖೆ ಸಂಬಂಧ ಈಗಾಗಲೇ ಆರೋಪಿಗಳ ಸುದೀರ್ಘ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿದೆ. ಅಂತೆಯೇ ಸಾಕ್ಷ್ಯದಾರರ ಹೇಳಿಕೆಗಳನ್ನು ದಾಖಲಿಸಿದೆ. ಇದರಲ್ಲಿ ಸಿಆರ್‌ಪಿಸಿ ಕಲಂ 164 ಅಡಿಯಲ್ಲಿ ನ್ಯಾಯಾಧೀಶರ ಎದುರೇ ಕೆಲವರ ಹೇಳಿಕೆಗಳನ್ನು ದಾಖಲಿಸಿ ಆರೋಪಿಗಳ ಕಾನೂನು ಕುಣಿಕೆ ಬಿಗಿಗೊಳಿಸಿದೆ.

ಅಂತೆಯೇ ಘಟನಾ ಸ್ಥಳ, ಆರೋಪಿಗಳ ಮನೆಗಳು ಸೇರಿದಂತೆ ವಿವಿಧೆಡೆ ಸಂಗ್ರಹಿಸಿದ್ದ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌)ಕ್ಕೆ ಕಳುಹಿಸಿತ್ತು. ಮಡಿವಾಳದ ಎಫ್‌ಎಸ್‌ಎಲ್‌ ಹಾಗೂ ಹೈದರಾಬಾದ್‌ನ ಸಿಎಫ್‌ಎಸ್‌ಎಲ್‌ನಿಂದ ವರದಿಗಳು ತನಿಖಾ ತಂಡದ ಕೈ ಸೇರಿವೆ. ಹೀಗಾಗಿ ಪ್ರಕರಣದ ತನಿಖೆ ಬಹುತೇಕ ಮುಗಿದಿದ್ದು, ತನಿಖಾಧಿಕಾರಿ ನೂರಕ್ಕೂ ಅಧಿಕ ಸಾಕ್ಷ್ಯಗಳು ಒಳಗೊಂಡಂತೆ ಸುಮಾರು 4 ಸಾವಿರಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳು ಜೂ.8ರಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಬಳಿಕ ಮೃತದೇಹವನ್ನು ಸುಮನಹಳ್ಳಿ ಜಂಕ್ಷನ್‌ ಸಮೀಪದ ರಾಜಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು. ಜೂ.9ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಈ ನಡುವೆ ಐವರು ಆರೋಪಿಗಳು ಹಣಕಾಸು ವಿಚಾರವಾಗಿ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಠಾಣೆಗೆ ತೆರಳಿ ಶರಣಾಗಿದ್ದರು. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಆರೋಪಿಗಳನ್ನು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ರೇಣುಕಾಸ್ವಾಮಿ ಕೊಲೆ ರಹಸ್ಯ ಬಯಲಾಗಿತ್ತು. ಬಳಿಕ ನಟ ದರ್ಶನ್‌, ಪ್ರೇಯಸಿ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳನ್ನು ಬಂಧಿಸಿದ್ದರು.

Share this article