ರಸ್ತೆ ದಾಟುವಾಗ ಸರಕು ಸಾಗಣೆಯ ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಓಕಳಿಪುರ ಬಸ್‌ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ. ಶ್ರೀರಾಮಪುರ ನಿವಾಸಿ ಲಲಿತಾ(60) ಮೃತ ದುರ್ದೈವಿ. 

ಬೆಂಗಳೂರು : ರಸ್ತೆ ದಾಟುವಾಗ ಸರಕು ಸಾಗಣೆಯ ಟೆಂಪೋ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಓಕಳಿಪುರ ಬಸ್‌ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ.

ಶ್ರೀರಾಮಪುರ ನಿವಾಸಿ ಲಲಿತಾ(60) ಮೃತ ದುರ್ದೈವಿ. ಈ ಸಂಬಂಧ ಚಾಲಕ ದೀಪಕ್‌(50) ಎಂಬಾತನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುವರ್ಣನ್ಯೂಸ್‌ ಮತ್ತು ಕನ್ನಡಪ್ರಭದಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದ ಲಲಿತಾ ಅವರು, ಕೆಲಸ ಮುಗಿಸಿ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಸ್ನೇಹಿತೆ ಜೊತೆ ಆಟೋದಲ್ಲಿ ಹೋಗಿದ್ದರು. ಮನೆಗೆ ಹೋಗಲು ಆಟೋದಿಂದ ಇಳಿದು ನಡೆದು ಕೊಂಡು ಹೋಗುವಾಗ ಓಕಳಿಪುರ ಬಸ್‌ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದಿದ್ದು, ಹಿಂಬದಿಯ ಚಕ್ರ ತಲೆ ಮೇಲೆ ಹರಿದಿದೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶೇಷಾದ್ರಿಪುರ ಸಂಚಾರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ 

ವಿಷಯ ತಿಳಿದು ಸ್ಥಳಕ್ಕೆ ಶೇಷಾದ್ರಿಪುರ ಸಂಚಾರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ ಚಾಲಕನನ್ನು ಬಂಧಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಲಲಿತಾ ಅವರ ಮಗ ಭರತ್‌ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ತಮಿಳುನಾಡಿನವರಾದ ಲಲಿತಾ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಅನಾರೋಗ್ಯ ಪೀಡಿತ ತಾಯಿಯೂ ಇದ್ದಾರೆ.

ಸಂತಾಪ: 

ಸುವರ್ಣನ್ಯೂಸ್‌ ಮತ್ತು ಕನ್ನಡಪ್ರಭದಲ್ಲಿ ಕಳೆದ 15 ವರ್ಷಗಳಿಂದ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಲಲಿತಾ ಅವರು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಈ ದುರಂತ ನಡೆದಿದೆ. ಲಲಿತಾ ಅವರ ಸಾವಿಗೆ ಸುವರ್ಣನ್ಯೂಸ್‌ ಮತ್ತು ಕನ್ನಡಪ್ರಭದ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.