ಮಂಗಳೂರಿನ ಪ್ರಮುಖ ಹೆರಿಗೆ ಸರ್ಕಾರಿ ಆಸ್ಪತ್ರೆಯಾದ ಲೇಡಿಗೋಶನ್‌ನ ನೂತನ ಕಟ್ಟಡ ನಿರ್ಮಾಣ ಸಂದರ್ಭ ನಿರ್ಮಿತಿ ಕೇಂದ್ರದಿಂದ ಗುತ್ತಿಗೆದಾರರಿಗೆ ಪಾವತಿಯಾಗಬೇಕಿದ್ದ ಬಾಕಿ ಮೊತ್ತಕ್ಕೆ ಸಂಬಂಧಿಸಿದ ವಿವಾದ ಶನಿವಾರ ಲೋಕ ಅದಾಲತ್‌ನಲ್ಲಿ ರಾಜಿಯಲ್ಲಿ ಇತ್ಯರ್ಥಗೊಂಡಿದೆ.
ಮಂಗಳೂರು: ಮಂಗಳೂರಿನ ಪ್ರಮುಖ ಹೆರಿಗೆ ಸರ್ಕಾರಿ ಆಸ್ಪತ್ರೆಯಾದ ಲೇಡಿಗೋಶನ್‌ನ ನೂತನ ಕಟ್ಟಡ ನಿರ್ಮಾಣ ಸಂದರ್ಭ ನಿರ್ಮಿತಿ ಕೇಂದ್ರದಿಂದ ಗುತ್ತಿಗೆದಾರರಿಗೆ ಪಾವತಿಯಾಗಬೇಕಿದ್ದ ಬಾಕಿ ಮೊತ್ತಕ್ಕೆ ಸಂಬಂಧಿಸಿದ ವಿವಾದ ಶನಿವಾರ ಲೋಕ ಅದಾಲತ್‌ನಲ್ಲಿ ರಾಜಿಯಲ್ಲಿ ಇತ್ಯರ್ಥಗೊಂಡಿದೆ.ಬಡ್ಡಿ ಸೇರಿದಂತೆ ಗುತ್ತಿಗೆದಾರರಿಗೆ ನಿರ್ಮಿತಿ ಕೇಂದ್ರದಿಂದ ಕಕ್ಷಿದಾರ ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಸುಮಾರು 4 ಕೋಟಿ ರು. ಮೊತ್ತದ ಪರಿಹಾರ ಮೊತ್ತದ ಹಣವನ್ನು ರಾಜಿ ಸಂಧಾನದ ಮೂಲಕ ಸುಮಾರು 2 ಕೋಟಿ ರು.ಗೆ ಸೀಮಿತಗೊಳಿಸಿ ನೀಡುವ ಮೂಲಕ ಸಾರ್ವಜನಿಕ ಹಣ ಉಳಿತಾಯದ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಲಾಯಿತು.ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡದ ನಿರ್ಮಾಣ (2012-13ರ ಅವಧಿಯಲ್ಲಿ)ದ ವಿಚಾರದಲ್ಲಿ ಗುತ್ತಿಗೆದಾರರು ಹಾಗೂ ನಿರ್ಮಿತಿ ಕೇಂದ್ರದ ನಡುವೆ ವಿವಾದ ಏರ್ಪಟ್ಟು, ಇದನ್ನು ಮಧ್ಯಸ್ಥಿಕೆ (ಆಬ್ರಿಟ್ರೇಶನ್) ಮೂಲಕ ಬಗೆಹರಿಸಲು ವಾದಿ ಹಾಗೂ ಪ್ರತಿವಾದಿಗಳು ಬಯಸಿದ್ದರು. ಅದರಂತೆ ಜಿಲ್ಲಾ ನ್ಯಾಯಾಲಯದಲ್ಲಿ ಆಬ್ರಿಟ್ರೇಶನ್ ಮತ್ತು ಕನ್ಸಿಲೇಶನ್ ಕಾಯ್ದೆಯ ಕಲಂ 34ರ ಅಡಿ ಪರಿಶೀಲನೆಗೊಂಡು ಪ್ರಕರಣ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನಕ್ಕೆ ಸಲ್ಲಿಕೆಯಾಗಿತ್ತು.
ರಾಜಿ ಇತ್ಯರ್ಥದಲ್ಲಿ ಪ್ರಕರಣ ಬಗೆಹರಿಸಲು ಉಭಯ ವಕೀಲರ ಮೂಲಕ ನಾವು ಮುಂದಾಗಿದ್ದು, ಅದರಂತೆ ದ.ಕ. ಜಿಲ್ಲಾಧಿಕಾರಿಯವರು ಕೂಡಾ ಸಂಧಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಪರಿಹಾರ ಮೊತ್ತವನ್ನು 1,83,23,040 ರು.ಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರಿಗೆ ನೀಡಬೇಕಾಗಿದ್ದ ಮೊತ್ತ ಸುಮಾರು 4 ಕೋಟಿ ರು.ಗಳಷ್ಟಿದ್ದು, ರಾಜಿಯಿಂದಾಗಿ ಅದನ್ನು ಅರ್ಧಕ್ಕೆ ಇಳಿಕೆ ಮಾಡಿರುವುದರಿಂದ ಸರ್ಕಾರಕ್ಕೂ ಅನುಕೂಲವಾಗಿ ಪರಿಣಮಿಸಿದೆ ಎಂದು ಲೋಕ ಅದಾಲತ್‌ನಲ್ಲಿ ವಿವಾದವನ್ನು ಬಗೆಹರಿಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ತಿಳಿಸಿದರು.ರಾಜಿ ಸಂಧಾನದ ಮೂಲಕ ಉಭಯ ಕಕ್ಷಿದಾರರು ಒಪ್ಪಿಕೊಳ್ಳುವ ಮೂಲಕ ಪ್ರಕರಣ ಬಗೆಹರಿದಿರುವುದಲ್ಲದೆ, ಸರಕಾರದ ಸಾರ್ವಜನಿಕ ಹಣವೂ ಅರ್ಧಕರ್ಧ ಉಳಿದಿದೆ. ಇದೊಂದು ವಿಶೇಷ ಪ್ರಕರಣವಾಗಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜು ತಿಳಿಸಿದರು.
ಉಳಿದಂತೆ ಲೋಕ ಅದಾಲತ್‌ನಲ್ಲಿ ಚೆಕ್ ಬೌನ್ಸ್ ಪ್ರಕರಣ, ಮೋಟಾರು ವಾಹನ ಅಪಘಾತ ವಿಮೆ ಪ್ರಕರಣ ಸೇರಿದಂತೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡಬಿದ್ರೆ ಹಾಗೂ ಸುಳ್ಯ ನ್ಯಾಯಾಲಯಗಳ ಆವರಣದಲ್ಲಿ ರಾಜಿ ಮಾಡಬಹುದಾದ ಸುಮಾರು 4,000 ದಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲು ಕೈಗೆತ್ತಿಕೊಳ್ಳಲಾಗಿದೆ ಎಂದು ನ್ಯಾ. ಜೈಬುನ್ನಿಸಾ ತಿಳಿಸಿದ್ದಾರೆ. ವಿಚ್ಛೇದನ ಬಯಸಿದ್ದವರು ಲೋಕ ಅದಾಲತ್‌ನಲ್ಲಿ ರಾಜಿ!:ಪರಸ್ಪರ ಹೊಂದಾಣಿಕೆಯ ಕೊರತೆಯಿಂದ ಉಂಟಾದ ಸಮಸ್ಯೆಯಿಂದ 10 ವರ್ಷಗಳ ವೈವಾಹಿಕ ಜೀವನದಿಂದ ವಿಚ್ಛೇದನಕ್ಕೆ ಮುಂದಾಗಿದ್ದ ಜೋಡಿಯೊಂದು ನ್ಯಾಯಾಧೀಶರ ಎದುರು ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೆ ದಾಂಪತ್ಯ ಜೀವನಕ್ಕೆ ಒಂದಾದ ಪ್ರಸಂಗಕ್ಕೆ ಮಂಗಳೂರು ನ್ಯಾಯಾಲಯ ಸಾಕ್ಷಿಯಾಯಿತು.
ದ.ಕ. ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಲಾದ ಲೋಕ ಅದಾಲತ್‌ನಲ್ಲಿ ಮಂಗಳೂರಿನ ಈ ಜೋಡಿ ನ್ಯಾಯಾಧೀಶರಾದ ಲಕ್ಷ್ಮೀ ನಾರಾಯಣ ಭಟ್ ಅವರ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ದಾಂಪತ್ಯ ಜೀವನದಲ್ಲಿ ಮುಂದುವರಿಯಲು ಒಪ್ಪಿಕೊಂಡರು.ಪುಟ್ಟಮಗುವನ್ನು ಹೊಂದಿರುವ ಜೋಡಿಯ ದಾಂಪತ್ಯದಲ್ಲಿ ಕಾಣಿಸಿಕೊಂಡ ಬಿರುಕಿನಿಂದ ಕಳೆದ ಮೂರು ವರ್ಷಗಳಿಂದ ಬೇರ್ಪಟ್ಟಿದ್ದರು. ತನ್ನ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಜೀವನಾಂಶಕ್ಕೆ ಪರಿಹಾರ ನೀಡುವಂತೆ ಕೋರಿ ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಲೋಕ ಅದಾಲತ್‌ನಲ್ಲಿ ರಾಜಿಯೊಂದಿಗೆ ತಮ್ಮ ವೈವಾಹಿಕ ಜೀವನ ಮುಂದುವರಿಸಲು ಒಪ್ಪಿಕೊಂಡಿರುವುದಾಗಿ ನ್ಯಾಯ ಸಂಧಾನ ನಡೆಸಿರುವ ನ್ಯಾಯಾಧೀಶರು ತಿಳಿಸಿದ್ದಾರೆ. ಲೋಕ ಅದಾಲತ್‌ನಲ್ಲಿ ಈ ದಿನ ಇಂತಹ ಮೂರು ವಿಚ್ಚೇದನ ಪ್ರಕರಣಗಳು ರಾಜಿ ಸಂಧಾನಕ್ಕೆ ನಿಗದಿಯಾಗಿದ್ದು, ಎರಡು ಪ್ರಕರಣಗಳು ಬಗೆಹರಿದಿವೆ ಎಂದು ಹಿರಿಯ ಜಿಲ್ಲಾ ನಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ತಿಳಿಸಿದ್ದಾರೆ.