ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕೃಷಿ ಹೊಂಡದ ಬಳಿ ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ತಾಲೂಕಿನ ಹೊಸೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.ಪ್ರಣಯ್ (೭), ನಿಶಾಂತ್ (೪) ಮೃತ ಬಾಲಕರಾಗಿದ್ದಾರೆ. ತಾಲೂಕಿನ ಕೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದ ಕೃಷ್ಣ ಹಾಗೂ ಪ್ರಶಾಂತ್ ಐಬಿಸಿ ಎಸ್ಟೇಟ್ ಲೈನ್ ಮನೆಯಲ್ಲಿ ವಾಸವಿದ್ದು, ಎಸ್ಟೇಟ್‌ನ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೃಷ್ಣ ಪುತ್ರ ಪ್ರಣಯ್ ಎರಡನೇ ತರಗತಿ ಓದುತ್ತಿದ್ದು ಪ್ರಶಾಂತ್ ಪುತ್ರ ನಿಶಾಂತ್ ಅಂಗನವಾಡಿಗೆ ಹೋಗುತ್ತಿದ್ದ. ಕೃಷ್ಣ ಹಾಗೂ ಪ್ರಶಾಂತ್ ದಂಪತಿ ಕಾಫಿ ಎಸ್ಟೇಟ್‌ಗೆ ಕೆಲಸಕ್ಕೆ ಹೋಗಿದ್ದಾರೆ. ಶಾಲೆ ಹಾಗೂ ಅಂಗನವಾಡಿಗೆ ರಜೆ ಇದ್ದುದ್ದರಿಂದ ಪ್ರಣಯ್ ಹಾಗೂ ನಿಶಾಂತ್ ಮನೆಯ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಲೇ ಕಾಫಿ ಎಸ್ಟೇಟ್‌ನಲ್ಲಿದ್ದ ಕೃಷಿ ಹೊಂಡದ ಬಳಿಗೆ ಕೈಯಲ್ಲಿದ್ದ ಪ್ಲಾಸ್ಟಿಕ್ ಆಟಿಕೆಗಳನ್ನು ಹಿಡಿದು ತೆರಳಿದ್ದಾರೆ. ಪ್ರಣಯ್ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ರೈಲನ್ನು ಕೃಷಿ ಹೊಂಡಕ್ಕೆ ಎಸೆದಿದ್ದಾನೆ. ನಂತರ ಇಬ್ಬರು ಹೊಂಡದ ದಡದಲ್ಲಿ ಚಪ್ಪಲಿ ಬಿಟ್ಟು ರೈಲು ತರಲು ನೀರಿಗೆ ಇಳಿದಿದ್ದಾರೆ. ಕೃಷಿ ಹೊಂಡದಲ್ಲಿ ನೀರು ತುಂಬಿದ್ದರಿಂದ ಮೇಲೆ ಬರಲಾರದೆ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರು ಕಾಣದೆ ಇದ್ದಾಗ ಪೋಷಕರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದಾರೆ. ಕಾಫಿ ಎಸ್ಟೇಟ್‌ನಲ್ಲಿದ್ದ ಕೃಷಿ ಹೊಂಡದ ಬಳಿ ಬಂದು ನೋಡಿದಾಗ ದಡದಲ್ಲಿ ಮಕ್ಕಳ ಚಪ್ಪಲಿಗಳು ಕಂಡಿವೆ. ಕೂಡಲೇ ಹೊಂಡಕ್ಕೆ ಇಳಿದು ಶೋಧಕಾರ್ಯ ನಡೆಸಿದಾಗ ಇಬ್ಬರೂ ಮಕ್ಕಳ ಶವಗಳು ದೊರೆತಿವೆ. ಎರಡು ಶವಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ರವಾಸಿದ್ದಾರೆ. ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಯಿತು.
ಆಸ್ಪತ್ರೆ ಬಳಿ ಮಕ್ಕಳನ್ನು ಕಳೆದುಕೊಂಡ ಪೋಷಕರು ಗೋಳಾಡುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.