ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚಿಸಿದ ಕೈ ಕಾರ್ಯಕರ್ತೆ

KannadaprabhaNewsNetwork | Updated : Jan 30 2024, 04:17 PM IST

ಸಾರಾಂಶ

ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ₹20 ಲಕ್ಷ ಪಡೆದು ಬಳಿಕ ವಂಚನೆ ಮಾಡಿದ ಆರೋಪದಡಿ ಯುವ ಕಾಂಗ್ರೆಸ್‌ ಕಾರ್ಯಕರ್ತೆ ಎನ್ನಲಾದ ಸಂಧ್ಯಾ ಪವಿತ್ರಾ ನಾಗರಾಜ್‌ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ನೌಕರಿ ಕೊಡಿಸುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ₹20 ಲಕ್ಷ ಪಡೆದು ಬಳಿಕ ವಂಚನೆ ಮಾಡಿದ ಆರೋಪದಡಿ ಯುವ ಕಾಂಗ್ರೆಸ್‌ ಕಾರ್ಯಕರ್ತೆ ಎನ್ನಲಾದ ಸಂಧ್ಯಾ ಪವಿತ್ರಾ ನಾಗರಾಜ್‌ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಾರುತಿನಗರ ನಿವಾಸಿ ವೀಣಾ ನೀಡಿದ ದೂರಿನ ಮೇರೆಗೆ ಪೊಲೀಸರು ಸಂಧ್ಯಾ ಪವಿತ್ರಾ ನಾಗರಾಜ್‌ ವಿರುದ್ಧ ಗಂಭೀರ ಸ್ವರೂಪವಲ್ಲದ ಪ್ರಕರಣ (ಎನ್‌ಸಿಆರ್‌) ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲಿ ಏನಿದೆ?
‘ಕೆಲ ವರ್ಷಗಳ ಹಿಂದೆ ನನಗೆ ಸಂಧ್ಯಾ ಪವಿತ್ರಾ ನಾಗರಾಜ್‌ ಅವರು ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ನಾನು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವ ವಿಷಯ ತಿಳಿದು, ಬಹುಮಹಡಿ ಕಟ್ಟಡದಲ್ಲಿ ಸರ್ಕಾರಿ ಕೆಲಸ ಕೊಡುವುದಾಗಿ ಅವರು ನನ್ನಿಂದ ವಿವಿಧ ಹಂತಗಳಲ್ಲಿ ₹20 ಲಕ್ಷ ಪಡೆದುಕೊಂಡಿದ್ದಾರೆ.

ನಾನು ಕೊಟ್ಟಿರುವುದಕ್ಕೆ ದಾಖಲೆಗಳು ಇವೆ. ಇದೀಗ ಸರ್ಕಾರಿ ಕೆಲಸವನ್ನೂ ಕೊಡಿಸದೆ, ನನ್ನ ಹಣವನ್ನೂ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಲಾಗಿದೆ.

ಅಕ್ಕ-ತಮ್ಮನಿಗೆ ₹11.20 ಲಕ್ಷ ವಂಚನೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಧ್ಯಾ ಪವಿತ್ರಾ ನಾಗರಾಜ್‌ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಮಹಾಲಕ್ಷ್ಮೀ ಲೇಔಟ್‌ ನಿವಾಸಿ ರೂಪಾ ಎಂಬುವವರು ನೀಡಿದ ದೂರಿನ ಮೇರೆಗೆ ಜಯನಗರ ಠಾಣೆ ಪೊಲೀಸರು ಸಂಧ್ಯಾ, ಹರೀಶ್‌, ಭಾನುಪ್ರಕಾಶ್‌ ಎಂಬುವವರು ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಹಣಕ್ಕಾಗಿ ಅಂಗಲಾಚುವ ವಿಡಿಯೋ ವೈರಲ್‌: ಮತ್ತೊಂದು ಪ್ರಕರಣದಲ್ಲಿ ಸಂಧ್ಯಾ ಅವರು ಯಾದಗಿರಿ ಮೂಲದ ಚಂದು ಎಂಬ ಯುವಕನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರು. ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ. 

ಇದೀಗ ಚಂದು ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದು, ಹಣ ವಾಪಸ್‌ ನೀಡುವಂತೆ ಸಂಧ್ಯಾ ಅವರ ಬಳಿ ಅಂಗಲಾಚುವ ವಿಡಿಯೊ ವೈರಲ್‌ ಆಗಿದೆ.

ಕಾಂಗ್ರೆಸ್‌ ನಾಯಕರ ಜತೆಗೆ ಫೋಟೋ: ವಂಚನೆ ಆರೋಪಕ್ಕೆ ಗುರಿಯಾಗಿರುವ ಸಂಧ್ಯಾ ಪವಿತ್ರಾ ನಾಗರಾಜ್‌ ಯುವ ಕಾಂಗ್ರೆಸ್‌ ಕಾರ್ಯಕರ್ತೆ ಎನ್ನಲಾಗಿದೆ. 

ಆಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜತೆಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Share this article