ಟ್ರೇಡಿಂಗ್ ಹೆಸರಲ್ಲಿ ಜನರಿಗೆ ವಂಚನೆ: 10 ಮಂದಿ ಸೆರೆ

KannadaprabhaNewsNetwork |  
Published : Dec 18, 2024, 01:45 AM IST
ಹಣ  | Kannada Prabha

ಸಾರಾಂಶ

ಟ್ರೇಡಿಂಗ್ ಹೂಡಿಕೆಯಲ್ಲಿ ದುಪ್ಪಟ್ಟು ಲಾಭ ಸಿಗಲಿದೆ ಎಂದು ಜನರಿಗೆ ಆಮಿಷವೊಡ್ಡಿ ವಂಚಿಸಿ ಹಣ ಲಪಟಾಯಿಸುತ್ತಿದ್ದ ಆನ್‌ಲೈನ್‌ ವಂಚಕರ ತಂಡವೊಂದನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಟ್ರೇಡಿಂಗ್ ಹೂಡಿಕೆಯಲ್ಲಿ ದುಪ್ಪಟ್ಟು ಲಾಭ ಸಿಗಲಿದೆ ಎಂದು ಜನರಿಗೆ ಆಮಿಷವೊಡ್ಡಿ ವಂಚಿಸಿ ಹಣ ಲಪಟಾಯಿಸುತ್ತಿದ್ದ ಆನ್‌ಲೈನ್‌ ವಂಚಕರ ತಂಡವೊಂದನ್ನು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜನಗರದ ಎಚ್‌.ಪ್ರಕಾಶ್‌, ರವಿಶಂಕರ್‌, ಸಾಯಿ ಪ್ರಜ್ವಲ್‌ ಅಲಿಯಾಸ್ ಸೋಮು, ಶ್ರೀನಿವಾಸ್ ರೆಡ್ಡಿ, ಒಬಳ ರೆಡ್ಡಿ, ಸುನೀಲ್ ಕುಮಾರ್‌, ಜಿ.ಎಂ.ಆಕಾಶ್‌, ಕಿಶೋರ್ ಕುಮಾರ್‌, ಮಧುಸೂದನ್ ರೆಡ್ಡಿ ಹಾಗೂ ವಿ.ಸುರೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ ಲ್ಯಾಪ್‌ಟಾಪ್, ಬ್ಯಾಂಕ್ ಪಾಸ್‌ ಬುಕ್‌ಗಳು ಹಾಗೂ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಲ ದಿನಗಳ ಹಿಂದೆ ಟ್ರೇಡಿಂಗ್ ಗ್ರೂಪ್‌ನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಖಾಸಗಿ ಕಂಪನಿ ಉದ್ಯೋಗಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದರು. ಆಗ ತಾಂತ್ರಿಕ ಮಾಹಿತಿ ಆಧರಿಸಿ ಯಶವಂತಪುರ ಸಮೀಪ ಆರೋಪಿಗಳನ್ನು ಸಿಇಎನ್‌ ಠಾಣೆ ಎಸಿಪಿ ಪವನ್ ಮಾರ್ಗದರ್ಶನದಲ್ಲಿ ಸಬ್‌ ಇನ್ಸ್‌ ಪೆಕ್ಟರ್ ರಾಜು ನೇತೃತ್ವದ ತಂಡ ಬಂಧಿಸಿದೆ.

ಹೇಗೆ ವಂಚನೆ:

ಕೆಲ ತಿಂಗಳ ಹಿಂದೆ ತ್ಯಾಗರಾಜನಗರದಲ್ಲಿ ‘ಬ್ರ್ಯಾಂಡ್‌ ವೈನ್ ಗ್ರೂಪ್ ಅಂಡ್‌ ಇ8 ಬ್ರ್ಯಾಂಡ್ ವೈನ್ ಗ್ರೂಪ್ (BRANDYWINE GROUP & E8 BRANDWINE GROUP) ಎಂಬ ಸಂಸ್ಥೆಯನ್ನು ಮಧುಸೂದನ್ ರೆಡ್ಡಿ ಹಾಗೂ ಆತನ ಸ್ನೇಹಿತರು ಸ್ಥಾಪಿಸಿದ್ದರು. ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಜಾಹೀರಾತನ್ನು ಫೇಸ್‌ಬುಕ್‌ನಲ್ಲಿ ಆರೋಪಿಗಳು ಪ್ರಕಟಿಸಿದ್ದರು. ಅಲ್ಲದೆ ‘ಬ್ರ್ಯಾಂಡಿ ಸ್ಪೀಡಿ’ ಆ್ಯಪ್‌ ಅನ್ನು ಡೌನ್‌ ಲೋಡ್ ಮಾಡಿಕೊಂಡು ವಾಟ್ಸಾಪ್‌ ಗ್ರೂಪ್ ರಚಿಸಿಕೊಂಡು ಸಬ್‌ಸ್ಕ್ರೈಬ್‌ ಮಾಡಿದರೆ ದುಪ್ಟಟ್ಟು ಆದಾಯ ಸಿಗಲಿದೆ ಎಂದು ಈ ವಂಚರರು ಆಫರ್ ಕೊಟ್ಟಿದ್ದರು. ಈ ಜಾಹೀರಾತು ನಂಬಿ ಹಲವು ಮಂದಿ ಹಣ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದಾರೆ.

ವಂಚನೆ ಬಯಲಾಗಿದ್ದು ಹೇಗೆ

ಈ ಆನ್‌ಲೈನ್‌ ಟ್ರೇಡಿಂಗ್ ಜಾಲವನ್ನು ನಂಬಿ ಹಂತ ಹಂತವಾಗಿ ₹88.83 ಲಕ್ಷ ರು ಹಣವನ್ನು ತೊಡಗಿಸಿ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಮೋಸ ಹೋಗಿದ್ದರು. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಬ್ಯಾಂಕ್ ಖಾತೆಗಳ ವರ್ಗಾವಣೆ ಆಧರಿಸಿ ವಂಚನೆ ಜಾಲವನ್ನು ಪತ್ತೆ ಹಚ್ಚಿದ್ದಾರೆ.

ಸಂಘಟಿತವಾಗಿ ಕಾರ್ಯಾಚರಣೆ

ಕಳೆದೊಂದು ವರ್ಷದಿಂದ ಈ ಆನ್‌ಲೈನ್ ವಂಚನೆ ಜಾಲವು ಸಕ್ರಿಯವಾಗಿದ್ದು, ಹಲವು ಜನರಿಗೆ ದುಪ್ಪಟ್ಟು ಆದಾಯ ಗಳಿಸುವ ನೆಪದಲ್ಲಿ ಟೋಪಿ ಹಾಕಿ ಹಣ ದೋಚಿದ್ದಾರೆ. ಹತ್ತು ಜನರ ಈ ತಂಡವು ಸಂಘಟಿತವಾಗಿ ಕಾರ್ಯನಿರ್ವಹಿಸಿದ್ದು, ಆನ್‌ಲೈನ್ ಟ್ರೈಡಿಂಗ್ ಖಾತೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಹೀಗೆ ಪ್ರತಿಯೊಂದು ಹಂತವನ್ನು ಒಬ್ಬೊಬ್ಬ ಸದಸ್ಯ ನಿರ್ವಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ