-ಚೆನ್ನೈನಿಂದ ಮುಂಬೈಗೆ ಹೊರಟ್ಟಿದ್ದ ಟ್ಯಾಂಕರ್ । ಚಕ್ರ ಸ್ಫೋಟವಾಗಿ ಕಾರಿಗೆ ಡಿಕ್ಕಿಯಾಗಿ ಪಲ್ಟಿ-ಝೈಲಿನ್ ತುಂಬಿದ್ದ 3 ಟ್ಯಾಂಕರ್ಗಳು ಭಸ್ಮ । 10 ಗಂಟೆ ಹರಸಾಹಸ ಮಾಡಿದರೂ ಆರದ ಬೆಂಕಿ---
ರಾಸಾಯನಿಕ ವಸ್ತು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ಅಪಘಾತಕ್ಕೀಡಾಗಿ ಹೊತ್ತಿದು ಉರಿದು ಅಗ್ನಿಗೆ ಆಹುತಿಯಾಗಿರುವ ಘಟನೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕನಕಪುರ ರಸ್ತೆಯ ಪೂರ್ವಂಕರ ಅಪಾರ್ಟ್ಮೆಂಟ್ ಸಮೀಪದ ನೈಸ್ ರಸ್ತೆಯಲ್ಲಿ ಮಧ್ಯಾಹ್ನ 12ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚೆನ್ನೈನಿಂದ ಮುಂಬೈಗೆ ಹೊರಟ್ಟಿದ್ದ ಟ್ಯಾಂಕರ್ನ ಟೈಯರ್ ಸ್ಫೋಟಗೊಂಡು ಕಾರೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿ ಬಿದ್ದಿದ್ದು, ಅದರೊಳಗಿದ್ದ ನಾಲ್ಕೈದು ಪ್ರತ್ಯೇಕ ಮಿನಿ ಟ್ಯಾಂಕರ್ಗಳ ಪೈಕಿ 3 ಟ್ಯಾಂಕರ್ಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಉಳಿದ ಟ್ಯಾಂಕರ್ಗಳಿಗೂ ಬೆಂಕಿ ತಗಲದಂತೆ ಕಾರ್ಯಾಚರಣೆ ನಡೆಸಿದ್ದಾರೆ. ತಡರಾತ್ರಿವರೆಗೂ ಕಾರ್ಯಾಚರಣೆ
ಟ್ಯಾಂಕರ್ ಚಾಲಕ ನೀಡಿದ ಮಾಹಿತಿ ಪ್ರಕಾರ, ಟ್ಯಾಂಕರ್ನಲ್ಲಿ ಝೈಲಿನ್ ಎಂಬ ರಾಸಾಯನಿಕ ವಸ್ತು ತುಂಬಲಾಗಿದ್ದು, ಈ ಟ್ಯಾಂಕರ್ನಲ್ಲಿ ನಾಲ್ಕೈದು ಮಿನಿ ಟ್ಯಾಂಕರ್ಗಳು ಇವೆ. ಈ ಪೈಕಿ ಮೂರು ಟ್ಯಾಂಕರ್ಗಳಿಂದ ಝೈಲಿನ್ ಎಂಬ ಕೆಮಿಕಲ್ ಸೋರಿಕೆಯಾಗಿ ಬೆಂಕಿಗಾಹುತಿಯಾಗಿದೆ. ಸಾಮಾನ್ಯವಾಗಿ ಝೈಲಿನ್ ಎಂಬ ರಾಸಾಯನಿಕ ವಸ್ತುವನ್ನು ಹೈಡ್ರೋ ಕಾರ್ಬನ್ ಎಂದು ಕರೆಯಲಾಗುತ್ತದೆ. ಇದನ್ನು ಪೇಂಟ್ ಮತ್ತು ವ್ಯಾನಿಶರ್ಗೆ ಬಳಸಲಾಗುತ್ತದೆ. ಸತತ 10 ಗಂಟೆಗಳಿಂದ ಕಾರ್ಯಾಚರಣೆ ನಡೆಸಿದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿದೆ. ಫೋಮ್ ಹಾಕಿದರೂ ಆರದ ಬೆಂಕಿ:ಮಧ್ಯಾಹ್ನ 12.30ರಿಂದ 7 ಬೆಂಕಿ ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ ನಡೆಸಿದರೂ ಬೆಂಕಿ ಹಾರುತ್ತಿಲ್ಲ. ಹೀಗಾಗಿ ಸುಮಾರು 5000 ಲೀ. ಫೋಮ್ ಕೂಡ ಹಾಕಲಾಗುತ್ತಿದೆ. ಆದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಕೆಲ ಕ್ಷಣಗಳ ಬಳಿಕ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸುತ್ತ-ಮುತ್ತ ನಾಲ್ಕೈದು ಅಗ್ನಿಶಾಮಕ ವಾಹನಗಳಿಂದ ನಿರಂತರ ನೀರು ಹಾಕಲಾಗುತ್ತಿದೆ. ಸುಮಾರು 27 ಸಾವಿರ ಲೀಟರ್ ರಾಸಾಯನಿಕ ವಸ್ತು ಸೋರಿಕೆಯಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದರು.
ರಸ್ತೆಯ ಮಧ್ಯಭಾಗದಲ್ಲಿಯೇ ಟ್ಯಾಂಕರ್ ಧಗಧಗನೆ ಹೊತ್ತಿ ಉರಿದ ಪರಿಣಾಮ ನೈಸ್ ರಸ್ತೆಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ವಿಷಯ ತಿಳಿದು ಸ್ಥಳಕ್ಕೆ ತಲಘಟ್ಟಪುರ ಸಂಚಾರ ಪೊಲೀಸರು ಭೇಟಿ ನೀಡಿ ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸಪಟ್ಟರು. ಅಂಜನಾಪುರ ಭಾಗದಿಂದ ನಗರದ ಕಡೆ ಬರುವ ರಸ್ತೆಯಲ್ಲಿ ಸುಮಾರು 5 ಕಿ.ಮೀ ನಷ್ಟು ಹಾಗೂ ನಗರದಿಂದ ಹೊರ ಹೋಗುವ ರಸ್ತೆಯಲ್ಲಿ ಸುಮಾರು 3 ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ನೈಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಂಚಾರ ಪೊಲೀಸರು ಬದಲಿ ರಸ್ತೆ ಮುಖಾಂತರ ಟ್ರಾಫಿಕ್ ಕ್ಲೀಯರ್ ಮಾಡಿದರು.