ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕ್ಯಾಂಟರ್‌ಹರಿದು ಮಗು ಸ್ಥಳದಲ್ಲೇ ಸಾವು

KannadaprabhaNewsNetwork |  
Published : Feb 14, 2024, 02:18 AM IST
ಆಕ್ಸಿಡೆಂಟ್‌ | Kannada Prabha

ಸಾರಾಂಶ

ನಗರದಲ್ಲಿ ಎರಡು ಪ್ರತ್ಯೇಕ ಅಪಘಡದಲ್ಲಿ ಕ್ಯಾಂಟರ್‌ಗೆ ಮಗು, ಬೈಕ್‌ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಾಲೋ ಬ್ಲಾಕ್‌ ಇಟ್ಟಿಗೆ ಕಾರ್ಖಾನೆಯಲ್ಲಿ ಆಟವಾಡುತ್ತಿದ್ದ ಕಾರ್ಮಿಕ ದಂಪತಿಯ ಒಂದೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಕ್ಯಾಂಟರ್‌ ವಾಹನದ ಚಕ್ರ ಉರುಳಿದ ಪರಿಣಾಮ ಆ ಮಗು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರು ಮೂಲದ ಮಾಳಪ್ಪ ಮತ್ತು ಚಂದ್ರಕಲಾ ದಂಪತಿ ಪುತ್ರಿ ಸಪ್ತಾ ಮೃತ ಮಗು. ಕೊಪ್ಪ-ಬೇಗೂರು ರಸ್ತೆಯಲ್ಲಿ ಇರುವ ಹಾಲೋ ಬ್ಲಾಕ್‌ ಇಟ್ಟಿಗೆ ತಯಾರಿಸುವ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.

ಮಾಳಪ್ಪ ದಂಪತಿ ಈ ಹಾಲೋ ಬ್ಲಾಕ್‌ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಮಗುವಿನೊಂದಿಗೆ ಕಾರ್ಮಿಕರ ಶೆಡ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಬೆಳಗ್ಗೆ ದಂಪತಿ ಎಂದಿನಂತೆ ಕಾರ್ಖಾನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಅಲ್ಲೇ ಸಮೀಪದಲ್ಲಿ ತಮ್ಮ ಒಂದೂವರೆ ವರ್ಷದ ಮಗು ಸಪ್ತ ಆಟವಾಡುತ್ತಿತ್ತು. ಇದೇ ಸಮಯಕ್ಕೆ ಇಟ್ಟಿಗೆ ಲೋಡ್‌ ಮಾಡಿಕೊಂಡು ಹೋಗಲು ಬಂದಿದ್ದ ಕ್ಯಾಂಟರ್‌ ವಾಹನದ ಚಕ್ರ ಮಗುವಿನ ಮೇಲೆ ಉರುಳಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಕ್ಯಾಂಟರ್‌ ವಾಹನವನ್ನು ಜಪ್ತಿ ಮಾಡಿದ್ದಾರೆ. ಇನ್ನು ಘಟನೆ ಬಳಿಕ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಸ್ತೆಯ ವಿಭಜಕಕ್ಕೆ ಗುದ್ದಿದ ಬೈಕ್‌: ಸವಾರ ಸಾವು

ಕನ್ನಡಪ್ರಭ ವಾರ್ತೆ ಬೆಂಗಳೂರು

ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ದೊಡ್ಡಬಸ್ತಿಯ ಅಭಿಷೇಕ್‌(19) ಮೃತ ಸವಾರ. ಸೋಮವಾರ ಮಧ್ಯರಾತ್ರಿ 12ರ ಸುಮಾರಿಗೆ ಉಲ್ಲಾಳ ರಸ್ತೆಯ ವಿದ್ಯಾನಿಕೇತನ್‌ ಸರ್ಕಲ್‌ ಕಡೆಯಿಂದ ಅಮ್ಮಾ ಆಶ್ರಮದ ಕಡೆಗೆ ಬರುವಾಗ ಈ ಅಪಘಾತ ಸಂಭವಿಸಿದೆ.

ಮೃತ ಸವಾರ ಅಭಿಷೇಕ್‌ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಸೋಮವಾರ ರಾತ್ರಿ ಮನೆಯಲ್ಲಿ ತಾಯಿ ಮತ್ತು ತಮ್ಮನ ಜತೆಗೆ ಜಗಳವಾಗಿತ್ತು. ಬಳಿಕ ಅಭಿಷೇಕ್‌ ದ್ವಿಚಕ್ರ ವಾಹನದಲ್ಲಿ ಸಮೀಪದಲ್ಲೇ ಇದ್ದ ಚಿಕ್ಕಮ್ಮನ ಮನೆಗೆ ತೆರಳಿ ರಾತ್ರಿ 10.30ರ ಸುಮಾರಿಗೆ ಊಟ ಮಾಡಿ ಹೊರಗೆ ಬಂದಿದ್ದ. ಬಳಿಕ ಉಲ್ಲಾಳ ರಸ್ತೆಯಲ್ಲಿ ವಿದ್ಯಾನಿಕೇತನ್‌ ಸರ್ಕಲ್‌ ಕಡೆಯಿಂದ ಅಮ್ಮಾ ಆಶ್ರಮದ ಕಡೆಗೆ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ.

ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಅಭಿಷೇಕ್‌ಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಅಭಿಷೇಕ್‌ ಮೃತಪಟ್ಟಿದ್ದಾನೆ.

ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಇನ್ನು ಅಭಿಷೇಕ್‌ ಮದ್ಯ ಸೇವಿಸಿದ್ದ ಬಗ್ಗೆ ಖಚಿತ ಮಾಹಿತಿ ಇಲ್ಲ. ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಖಚಿತವಾಗಲಿದೆ. ಈ ಸಂಬಂಧ ಜ್ಞಾನಭಾರತಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!