ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಲ ಮಂದಿರದಲ್ಲಿರುವ ಎಲ್ಲ 22 ಮಕ್ಕಳನ್ನು ಅವರ ಪೋಷಕರಿಗೆ ಸುಪರ್ದಿಗೆ ಒಪ್ಪಿಸಲು ಆದೇಶಿಸುವಂತೆ ಕೋರಿ ಮೇಘಾಲಯ ರಾಜ್ಯದ ಜೈಂಟಿಯಾ ಹಿಲ್‌ಸ್ ಜಿಲ್ಲೆ ನಿವಾಸಿ ವಯ್ಲಾಡ್ ನಾಂಗ್ಟುಡು ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ.
ಎಲ್ಲ 22 ಮಕ್ಕಳು, ಮಕ್ಕಳ ಕಲ್ಯಾಣ ಅಧಿಕಾರಿ ಹಾಗೂ ಇತರರು ಮೇಘಾಲಯಕ್ಕೆ ತೆರಳಲು ತಗಲುವ ವಿಮಾನ ಪ್ರಯಾಣದ ವೆಚ್ಚವನ್ನು ಬಾಲ ನ್ಯಾಯ ಮಂಡಳಿ ತಕ್ಷಣ ಬಿಡುಗಡೆಗೊಳಿಸಬೇಕು. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ ಬಳಿಕ ಮಕ್ಕಳ ಪೋಷಕರನ್ನು ಪತ್ತೆ ಹಚ್ಚಿ, ಪರಿಶೀಲನೆ ನಡೆಸಿ ಅವರ ಸುಪರ್ದಿಗೆ ಒಪ್ಪಿಸುವುದು ಆ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಜವಾಬ್ದಾರಿಯಾಗಲಿದೆ. ಮಕ್ಕಳನ್ನು ಸುರಕ್ಷಿತವಾಗಿ ಒಪ್ಪಿಸಿದ ಬಗ್ಗೆ ಕರ್ನಾಟಕದ ಮಕ್ಕಳ ಕಲ್ಯಾಣ ಸಮಿತಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.ಇದಕ್ಕೂ ಮುನ್ನ ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲರು ವಾದ ಮಂಡಿಸಿ, ಮೇಘಾಲಯ ರಾಜ್ಯದ 22 ಮಕ್ಕಳು ಸರ್ಕಾರಿ ಬಾಲ ಮಂದಿರದ ಸುಪರ್ದಿಯಲ್ಲಿದ್ದಾರೆ. ಮಕ್ಕಳ ಕಲ್ಯಾಣ ಅಧಿಕಾರಿ (ಸಿಡಬ್ಲ್ಯೂಒ) ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ಅವರ ಹಿತದೃಷ್ಟಿಯಿಂದ ಎಲ್ಲ 22 ಮಕ್ಕಳನ್ನು ವಿಮಾನ ಪ್ರಯಾಣದ ಮೂಲಕ ಅವರ ಪೋಷಕರಿಗೆ ಒಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಮಾನಯಾನಕ್ಕೆ ತಗಲುವ ವೆಚ್ಚವನ್ನು ಬಾಲ ನ್ಯಾಯ ನಿಧಿಯಿಂದ ಬಿಡುಗಡೆ ಮಾಡುವಂತೆ ಬಾಲ ನ್ಯಾಯ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳನ್ನು ಮೇಘಾಲಯ ರಾಜ್ಯದ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ನೀಡಲಾಗಿದೆ. ಮುಂದಿನ ಕ್ರಮವನ್ನು ಅಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಕೈಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.