ಮದ್ಯದ ಅಮಲಿನಲ್ಲಿ ಹೆತ್ತತಾಯಿಯನ್ನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಮಗನಿಗೆ ಸರ್ಕಾರಿ ಶಾಲೆಯಲ್ಲಿ ಆರು ತಿಂಗಳು ಸಮುದಾಯ ಸೇವೆ ಮಾಡಲು ನಿರ್ದೇಶಿಸಿ ಅಪರೂಪದ ಆದೇಶ ಹೊರಡಿಸಿದೆ.
ವೆಂಕಟೇಶ್ ಕಲಿಪಿ
ಬೆಂಗಳೂರು : ಕುಡಿದು ಮನೆಗೆ ಬರದಂತೆ ತಾಕೀತು ಮಾಡಿದಕ್ಕೆ ಮದ್ಯದ ಅಮಲಿನಲ್ಲಿ ಹೆತ್ತತಾಯಿಯನ್ನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಮಗನನ್ನು ‘ಸಾವಿಗೆ ಕಾರಣವಾದ ಅಪರಾಧ’ ಅಡಿ ದೋಷಿಯಾಗಿ ತೀರ್ಮಾನಿಸಿರುವ ಹೈಕೋರ್ಟ್, ಅಪರಾಧಿಯು ಈಗಾಗಲೇ ಎರಡು ವರ್ಷ ಜೈಲು ವಾಸ ಅನುಭವಿಸಿರುವುದನ್ನು ಪರಿಗಣಿಸಿ ಸರ್ಕಾರಿ ಶಾಲೆಯಲ್ಲಿ ಆರು ತಿಂಗಳು ಸಮುದಾಯ ಸೇವೆ ಮಾಡಲು ನಿರ್ದೇಶಿಸಿ ಅಪರೂಪದ ಆದೇಶ ಹೊರಡಿಸಿದೆ.
ತಾಯಿಯನ್ನು ಕೊಲೆಗೈದ ಪ್ರಕರಣದಿಂದ ಮಡಿಕೇರಿ ತಾಲೂಕಿನ ಚಡಾವು ಗ್ರಾಮದ ಎನ್.ಬಿ. ಅನಿಲ್‌ನನ್ನು ಖುಲಾಸೆಗೊಳಿಸಿದ ಕೊಡಗು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿ ಗ್ರಾಮೀಣ ಸರ್ಕಲ್ ಇನ್ಸ್‌ಪೆಕ್ಟರ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು. ಕೊಲೆ ಅಪರಾಧದಿಂದ ಅನಿಲ್‌ನನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರ ಎಂದು ಆದೇಶಿಸಿದೆ. ಇದೇ ವೇಳೆ ಅನಿಲ್‌ನನ್ನು ಸಾವಿಗೆ ಕಾರಣವಾದ ಅಪರಾಧದಡಿ (ಐಪಿಸಿ ಸೆಕ್ಷನ್ 304-2) ಅಡಿ ದೋಷಿ ಎಂದು ತೀರ್ಪು ನೀಡಿದೆ.
ಈ ಅಪರಾಧಕ್ಕೆ ಹತ್ತು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆದರೆ, ಪ್ರಕರಣದಲ್ಲಿ ತಾಯಿಯನ್ನು ಹತ್ಯೆ ಮಾಡುವ ಉದ್ದೇಶ ಅನಿಲ್‌ಗೆ ಇರಲಿಲ್ಲ. ಕುಡಿದ ಅಮಲಿನಲ್ಲಿ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಅಪರಾಧಿಯ ಕೃತ್ಯ ಅಸಹ್ಯಕರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಘಟನೆ ನಡೆದಾಗ ಆತನಿಗೆ 29 ವರ್ಷ. ಆತ ಈಗಾಗಲೇ ಎರಡು ವರ್ಷ ಜೈಲು ವಾಸ ಅನುಭವಿಸಿದ್ದಾನೆ. ಹಾಗಾಗಿ, ಆ ಅವಧಿಗೆ ಜೈಲು ಶಿಕ್ಷೆಯನ್ನು ಸೀಮಿತಗೊಳಿಸಿ, ದಂಡ ವಿಧಿಸುವುದರಿಂದ ನ್ಯಾಯ ಸಿಗಲಿದೆ ಎಂದು ಪೀಠ ನಿರ್ಧರಿಸಿದೆ.
ಅಲ್ಲದೆ, ಮಾಡಿರುವ ಪಾಪ ಕೃತ್ಯಕ್ಕೆ ಪ್ರಾಯಶ್ಚಿತ್ತಕ್ಕಾಗಿ ಸಮುದಾಯ ಸೇವೆ ಮಾಡಲು ಅಪರಾಧಿಗೆ ನಿರ್ದೇಶಿಸುವುದು ಸೂಕ್ತ. ಅದರಂತೆ ಅನಿಲ್‌ಗೆ ಜೈಲು ಶಿಕ್ಷೆಯನ್ನು ಎರಡು ವರ್ಷಕ್ಕೆ ಸೀಮಿತಗೊಳಿಸಿದ ನ್ಯಾಯಪೀಠ, 10 ಸಾವಿರ ರು. ದಂಡ ವಿಧಿಸಿದೆ. ದಂಡ ಮೊತ್ತವನ್ನು ಪಾವತಿಸದಿದ್ದರೆ ಆರು ತಿಂಗಳ ಕಾಲ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು. ಸಂಪಾಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೌಸ್ ಕೀಪಿಂಗ್, ತೋಟಗಾರಿಕೆ ಇತ್ಯಾದಿ ಸಮುದಾಯ ಸೇವೆ ಮಾಡಬೇಕು. ಸಮುದಾಯ ಸೇವೆ ಸಲ್ಲಿಸದಿದ್ದರೆ 25 ಸಾವಿರ ರು. ಹೆಚ್ಚುವರಿ ದಂಡ ಪಾವತಿಸಬೇಕು. ಆ ದಂಡ ಪಾವತಿಸಲು ವಿಫಲವಾದರೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.
ಪ್ರಕರಣದ ವಿವರ:
ಅನಿಲ್ ಮದ್ಯಕ್ಕೆ ದಾಸನಾಗಿದ್ದು, ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಕೆಲಸಕ್ಕೆ ಹೋಗುವಂತೆ ತಾಯಿ ಗಂಗಮ್ಮ ಒತ್ತಾಯಿಸುತ್ತಿದ್ದರು. 2015ರ ಏ.4ರಂದು ಕುಡಿದ ಮನೆಗೆ ಬರದಂತೆ ಅನಿಲ್‌ಗೆ ತಾಕೀತು ಮಾಡಿದ್ದ ತಾಯಿ, ದಾರಿ ತಪ್ಪಿರುವ ಬಗ್ಗೆ ತೀವ್ರವಾಗಿ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಆತ ದೊಣ್ಣೆಯಿಂದ ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ವೈದ್ಯರ ಮಾಹಿತಿ ಮೇರೆಗೆ ಸಂಪಾಂಜೆ ಹೊರ ಪೊಲೀಸ್ ಠಾಣೆಯ ಮುಖ್ಯಪೇದೆ ಆಸ್ಪತ್ರೆಗೆ ಭೇಟಿ ನೀಡಿ ಗಂಗಮ್ಮಳ ಮರಣಪೂರ್ವ ಹೇಳಿಕೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಕೆ 2015ರ ಏ.5ರಂದು ಸಂಜೆ 4.35ಕ್ಕೆ ಸಾವನ್ನಪ್ಪಿದ್ದರು.
ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ (ಐಪಿಸಿ ಸೆಕ್ಷನ್ 302) ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಧಾರಗಳ ಕೊರತೆಯಿಂದ ಕೊಲೆ ಅಪರಾಧದಿಂದ ಅನಿಲ್‌ನನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ 2017ರ ಮಾ.2ರಂದು ಆದೇಶಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪೊಲೀಸರ ಪರ ಸರ್ಕಾರಿ ವಕೀಲ ಪಿ. ತೇಜೇಶ್, ಗಂಗಮ್ಮ ಮರಣ ಪೂರ್ವ ಹೇಳಿಕೆಯಿಂದ ಅನಿಲ್ ಕೊಲೆಗೈದಿರುವುದು ದೃಢಪಡುತ್ತದೆ. ಅದನ್ನು ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ವಾದಿಸಿದ್ದರು.