12 ವರ್ಷದ ಪೋಕ್ಸೋ ಕೇಸ್‌ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಿ: ಹೈಕೋರ್ಟ್‌

KannadaprabhaNewsNetwork |  
Published : Jul 14, 2026, 04:15 AM ISTUpdated : Jul 14, 2026, 04:29 AM IST
Karnataka High court

ಸಾರಾಂಶ

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 2014ರಲ್ಲಿ ನಡೆದಿದ್ದ 6 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು 8 ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ(ಪೋಕ್ಸೋ ವಿಶೇಷ ಕೋರ್ಟ್) ನಿರ್ದೇಶಿಸಿದೆ.

 ಬೆಂಗಳೂರು : ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 2014ರಲ್ಲಿ ನಡೆದಿದ್ದ 6 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು 8 ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ(ಪೋಕ್ಸೋ ವಿಶೇಷ ಕೋರ್ಟ್) ನಿರ್ದೇಶಿಸಿದೆ.

ಪ್ರಕರಣದ ವಿಚಾರಣೆಯನ್ನು‌ ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ‌ ಪೀಠ ಈ ನಿರ್ದೇಶನ ನೀಡಿದೆ. 2014ರಲ್ಲಿ ನಡೆದ ಪ್ರಕರಣವು‌ ಇನ್ನೂ ವಿಚಾರಣಾ ಹಂತದಲ್ಲಿಯೇ ಇದೆ. ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ನೆಪದಲ್ಲಿ ಅನಗತ್ಯ ಮುಂದೂಡಿಕೆಗೆ ಒಳಗಾಗಿರುವುದನ್ನು ಒಪ್ಪಲಾಗದು. ಮುಗ್ಧ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕೋರ್ಟ್‌ನಲ್ಲಿ ಸುದೀರ್ಘ 12 ವರ್ಷಗಳ ಕಾಲ ಬಾಕಿ ಉಳಿದಿದೆ ಎಂಬ ಆಘಾತಕಾರಿ ಸಂಗತಿಗಿಂತಲೂ ಮತ್ತೊಂದಿಲ್ಲ. ಇದು ಹೈಕೋರ್ಟ್‌ ಮನಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ ಎಂದು‌‌ ಪೀಠ ಕಟುವಾಗಿ ನುಡಿದಿದೆ.

ಅನಗತ್ಯ ಮುಂದೂಡಿಕೆ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ

ಲೈಂಗಿಕ ದೌರ್ಜನ್ಯದಡಿ ಅವಮಾನಕ್ಕೆ ಒಳಗಾದ ಮಗುವನ್ನು ವಿಚಾರಣೆಯ ಭರದಲ್ಲಿ ಪದೇ ಪದೇ ಆಘಾತ ಅನುಭವಿಸುವಂತಹ ಸ್ಥಿತಿಗೆ ನೂಕುವುದು ಅನ್ಯಾಯ.‌ ಪ್ರತಿಯೊಂದು ಅನಗತ್ಯ ಮುಂದೂಡಿಕೆ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಹಾಗಾಗಿ, ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ಎಂಟು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಶಾಲೆಯಲ್ಲೇ ಅತ್ಯಾಚಾರ:

6 ವರ್ಷದ ಬಾಲಕಿಯ ಮೇಲೆ 2014ರ ಜು.14ರಂದು ಅತ್ಯಾಚಾರ ನಡೆದಿದೆ ಎಂಬ ಆರೋಪದಡಿ ಪೊಲೀಸರು ನಗರದ ಶಾಲೆಯ ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿದ್ದರು. ಜಿಮ್ನಾಸ್ಟಿಕ್ಸ್ ಕ್ಲಾಸ್ ಮುಗಿದ ನಂತರ ಬಾಲಕಿಯನ್ನು ಕೊಠಡಿಯಲ್ಲೇ ಉಳಿಸಿಕೊಂಡು ಇಬ್ಬರೂ ಅತ್ಯಾಚಾರ ಎಸಗಿರುವುದು ತನಿಖೆಯಿಂದ ದೃಢಪಟ್ಟಿತ್ತು. ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಘಟನೆ ನಡೆದು 12 ವರ್ಷಗಳಾದರೂ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಪೂರ್ಣಗೊಳಿಸಿರಲಿಲ್ಲ.‌ ಮತ್ತೊಂದೆಡೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹಾಗಾಗಿ, ತ್ವರಿತಗತಿ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತೆಯ ತಂದೆ ಹೈಕೋರ್ಟ್ ಗೆ ಮನವಿ ಮಾಡಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

10 ದಿನದ ಹಳೆಯದ್ದು ಎಂದು ಸುಳ್ಳು ಹೇಳಿ 2.5 ತಿಂಗಳ ಹಿಂದಿನ ಕಾರು ಮಾರಾಟ: ಹೈಕೋರ್ಟ್‌ ನೋಟಿಸ್
ಪತಿ, ಆತನ ಅಕ್ಕನ ಹೆಸರನ್ನು ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ