ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಮಹಿಳಾ ಟ್ರಸ್ಟಿಯೊಬ್ಬರ ಮನೆಯ ಲಾಕರ್‌ನಲ್ಲಿ ಐದು ವರ್ಷಗಳಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರು. ಕಳವು ಮಾಡಿದ್ದ ಹೌಸ್‌ ಕೀಪಿಂಗ್‌ ವ್ಯಕ್ತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

-ಕಳವು । ಟ್ರಸ್ಟ್‌ವೊಂದರ ಟ್ರಸ್ಟಿ ಮನೆಯ ಲಾಕರ್‌ನಲ್ಲಿದ್ದ ಹಣ

ಕನ್ನಡಪ್ರಭ ವಾರ್ತೆ ಬೆಂಗಳೂರು

ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಮಹಿಳಾ ಟ್ರಸ್ಟಿಯೊಬ್ಬರ ಮನೆಯ ಲಾಕರ್‌ನಲ್ಲಿ ಐದು ವರ್ಷಗಳಿಂದ ಹಂತ ಹಂತವಾಗಿ ಸುಮಾರು 40 ಲಕ್ಷ ರು. ಕಳವು ಮಾಡಿದ್ದ ಹೌಸ್‌ ಕೀಪಿಂಗ್‌ ವ್ಯಕ್ತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಶ್ರೀನಿವಾಸ್‌ ಎಸ್‌.ನಾಡಗೌಡ (36) ಬಂಧಿತ. ಜೆ.ಪಿ.ನಗರ 8ನೇ ಹಂತದ ಶ್ರೀಸಾಯಿ ದರ್ಶನಂ ಟ್ರಸ್ಟ್‌ನ ಟ್ರಸ್ಟಿ ಕೆ.ಎನ್‌.ಶರತ್‌ ಬಾಬು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಬಂಧಿತ ಆರೋಪಿ ಶ್ರೀನಿವಾಸ್‌ ಕಳೆದ 16 ವರ್ಷಗಳಿಂದ ಶ್ರೀ ಸಾಯಿ ದರ್ಶನಂ ಟ್ರಸ್ಟ್‌ನಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ. ಟ್ರಸ್ಟ್‌ನ ಮತ್ತೊಬ್ಬ ಟ್ರಸ್ಟಿ ಯಶೋಧ ಅವರು ದಸರಾ ರಜೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಇದಕ್ಕೂ ಮನೆಯ ಲಾಕರ್‌ನಲ್ಲಿ 2.7 ಲಕ್ಷ ರು. ನಗದು ಇರಿಸಿದ್ದರು. ಮನೆಗೆ ವಾಪಾಸ್‌ ಬಂದು ನೋಡಿದಾಗ ಲಾಕರ್‌ನಲ್ಲಿ ನಗದು ಇರಲಿಲ್ಲ. ಬಳಿಕ ಆರೋಪಿ ಶ್ರೀನಿವಾಸ್‌ನನ್ನು ಕರೆದು ವಿಚಾರಿಸಿದಾಗ ನನಗೇನು ಗೊತ್ತಿಲ್ಲ ಎಂದಿದ್ದಾನೆ. ಬಳಿಕ ಆತನ ಪರ್ಸ್‌ ಪರಿಶೀಲಿಸಿದಾಗ ಲಾಕರ್‌ನ ನಕಲಿ ಕೀ ಇರುವುದು ಪತ್ತೆಯಾಗಿದೆ. ಈ ವೇಳೆ ಶ್ರೀನಿವಾಸ್‌ನನ್ನು ಪ್ರಶ್ನೆ ಮಾಡಿದಾಗ ಲಾಕರ್‌ನಲ್ಲಿದ್ದ ಹಣ ಕದ್ದಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಬೆಟ್ಟಿಂಗ್‌ ಆಡಿ ಹಣ ಕಳೆದ!

ಆರೋಪಿ ಶ್ರೀನಿವಾಸ್‌ ಟ್ರಸ್ಟಿ ಯಶೋಧ ಅವರ ಮನೆಯ ಲಾಕರ್‌ನಲ್ಲಿ ಕದ್ದ ಲಕ್ಷಾಂತರ ರು. ಹಣವನ್ನು ಐಪಿಎಲ್‌ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ ಆಟವಾಡಿ ಕಳೆದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.