ಬೆಂಗಳೂರು : ಖಾಸಗಿ ಬಸ್‌ ಟ್ರಾವೆಲ್ಸ್‌ವೊಂದರ ವರ್ಕ್‌ಶಾಪ್ನಲ್ಲಿ ಜೋಡಿ ಕೊಲೆ ಕೇಸ್‌: ಆರೋಪಿ ಸೆರೆ

KannadaprabhaNewsNetwork |  
Published : Nov 12, 2024, 01:32 AM ISTUpdated : Nov 12, 2024, 06:42 AM IST
Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj

ಸಾರಾಂಶ

ಇತ್ತೀಚೆಗೆ ಖಾಸಗಿ ಬಸ್‌ ಟ್ರಾವೆಲ್ಸ್‌ವೊಂದರ ವರ್ಕ್‌ಶಾಪ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಡ್‌ನಿಂದ ಹೊಡೆದು ಇಬ್ಬರು ಸಹಕಾರ್ಮಿಕರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ಖಾಸಗಿ ಬಸ್‌ ಟ್ರಾವೆಲ್ಸ್‌ವೊಂದರ ವರ್ಕ್‌ಶಾಪ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ರಾಡ್‌ನಿಂದ ಹೊಡೆದು ಇಬ್ಬರು ಸಹಕಾರ್ಮಿಕರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿಯ ಸುರೇಶ್‌ ಅಲಿಯಾಸ್‌ ಶಶಿ(35) ಬಂಧಿತ. ಈತ ಸಿಂಗಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಕಂಪನಿಗೆ ಸೇರಿದ ವರ್ಕ್‌ಶಾಪ್‌ನಲ್ಲಿ ನ.8ರಂದು ರಾತ್ರಿ ಸುಮಾರು 9 ಗಂಟೆಗೆ ಸಹ ಕಾರ್ಮಿಕರಾದ ರಾಮನಗರ ಮೂಲದ ನಾಗೇಶ್‌ (52) ಮತ್ತು ಮಂಡ್ಯ ಮೂಲದ ಮಂಜೇಗೌಡ (44) ಎಂಬುವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳ ಎಂದು ಹೀಯಾಳಿಕೆ: ಕೊಲೆಯಾದ ನಾಗೇಶ್, ಮಂಜೇಗೌಡ ಹಾಗೂ ಆರೋಪಿ ಸುರೇಶ್ ಸಿಂಗಹಳ್ಳಿ ಎಸ್‌ಆರ್‌ಎಸ್ ಟ್ರಾವೆಲ್ಸ್‌ನ ವರ್ಕ್ ಶಾಪ್‌ನಲ್ಲಿ ಬಸ್‌ಗಳ ಸ್ವಚ್ಛತೆ ಕೆಲಸ ಮಾಡಿಕೊಂಡಿದ್ದರು. ರಾತ್ರಿ ವೇಳೆ ಮೂವರು ಕಾರ್ಮಿಕರ ಶೆಡ್‌ನಲ್ಲೇ ಮಲಗುತ್ತಿದ್ದರು. ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೀಯಾಳಿಸುತ್ತಿದ್ದರು. ನೀನು ಕಳ್ಳ, ಜೈಲಿಗೆ ಹೋಗಿ ಬಂದವನು ಎಂದು ನನ್ನ ಹಿನ್ನೆಲೆ ಪ್ರಸ್ತಾಪಿಸಿ ನಿಂದಿಸುತ್ತಿದ್ದರು ಎಂದು ಸುರೇಶ್‌ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಾನೆ.

ಮದ್ಯ ಸೇವನೆ ವೇಳೆ ನಿಂದಿಸಿದ್ದಕ್ಕೆ ಕೊಲೆ: ನ.8ರ ರಾತ್ರಿ ವರ್ಕ್‌ ಶಾಪ್‌ನ ಶೆಡ್‌ಲ್ಲಿ ಮೂವರು ಮದ್ಯ ಸೇವಿಸಿದ ವೇಳೆ ನಾಗೇಶ್‌ ಮತ್ತು ಮಂಜೇಗೌಡ ಮತ್ತೆ ನನ್ನ ಕೆಲಸ ಹಾಗೂ ತನ್ನ ಹಿನ್ನೆಲೆ ಬಗ್ಗೆ ಪ್ರಸ್ತಾಪಿಸಿ ನಿಂದಿಸಲು ಆರಂಭಿಸಿದರು. ಇದರಿಂದ ಕೋಪ ಬಂದು ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದು ಕಬ್ಬಿಣದ ರಾಡ್‌ನಿಂದ ಇಬ್ಬರ ಮೇಲೂ ಮನಬಂದಂತೆ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದಾಗಿ ಆರೋಪಿ ಸುರೇಶ್‌ ಹೇಳಿದ್ದಾನೆ.

ಕೊಲೆ ಮಾಡಿ ಕೆ.ಆರ್‌. ಮಾರ್ಕೆಟ್‌ಗೆ ಹೋಗಿದ್ದ: ಜೋಡಿ ಕೊಲೆ ಬಳಿಕ ಆರೋಪಿ ಸುರೇಶ್‌ ಸಿಂಗಹಳ್ಳಿಯಿಂದ ನಡೆದುಕೊಂಡೇ ಕೆ.ಆರ್‌.ಮಾರ್ಕೆಟ್‌ಗೆ ಬಂದಿದ್ದಾನೆ. ಜೋಡಿ ಕೊಲೆ ಘಟನಾ ಸ್ಥಳದಲ್ಲಿ ಸುರೇಶ್‌ ನಾಪತ್ತೆಯಾಗಿದ್ದ ಹಿನ್ನೆಲೆ ಈತನೇ ಕೊಲೆಗಾರ ಎಂದು ಬಲವಾಗಿ ಶಂಕಿಸಿದ್ದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿ ಸುರೇಶ್‌ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳು ಸೆರೆಯಾಗಿದ್ದವು. ಈ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸಿಟಿ ಮಾರ್ಕೆಟ್‌ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಾಜಿ ರೌಡಿ ಶೀಟರ್‌: ಆರೋಪಿ ಸುರೇಶ್‌ ಮಾಜಿ ರೌಡಿ ಶೀಟರ್‌ ಆಗಿದ್ದಾನೆ. ಈತನ ವಿರುದ್ಧ 2010 ಮತ್ತು 2012ರಲ್ಲಿ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಹಾಗೂ ಜೋಡಿ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಎರಡೂ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಹೀಗಾಗಿ ಈತನ ವಿರುದ್ಧ ಸುಬ್ರಮಣ್ಯಪುರ ಠಾಣೆ ಪೊಲೀಸರು ರೌಡಿ ಪಟ್ಟಿ ತೆರೆದಿದ್ದರು. ಈ ನಡುವೆ ಜೋಡಿ ಕೊಲೆ ಪ್ರಕರಣದಲ್ಲಿ ಖುಲಾಸೆಯಾಗಿದ್ದ. ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈ ನಡುವೆ ಸುಬ್ರಮಣ್ಯಪುರ ಠಾಣೆ ಪೊಲೀಸರು ರೌಡಿ ಪಟ್ಟಿಯಿಂದ ಆರೋಪಿಯ ಹೆಸರು ಕೈಬಿಟ್ಟಿದ್ದರು ಎಂದು ತಿಳಿದು ಬಂದಿದೆ.

9 ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆ: ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಸುರೇಶ್‌, 2012ರಿಂದ 2024ರ ಜನವರಿಗೆ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ಬಳಿಕ ಕೆ.ಆರ್‌.ಮಾರುಕಟ್ಟೆಯಲ್ಲಿ ಸೊಪ್ಪು ಮಾರಾಟ ಮಾಡಿಕೊಂಡು ಜೀವನ ಮಾಡುತ್ತಿದ್ದ. ಕಳೆದ 5 ತಿಂಗಳ ಹಿಂದೆಯಷ್ಟೇ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ನ ವರ್ಕ್‌ ಶಾಪ್‌ನಲ್ಲಿ ಬಸ್‌ಗಳ ಸ್ವಚ್ಛತಾ ಕೆಲಸಕ್ಕೆ ಸೇರಿಕೊಂಡಿದ್ದ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ