ಪಿಎಫ್‌ಐ ಕಾರ್ಯಕರ್ತನ ಹಣ ಬಿಡುಗಡೆಗೆ ಕೋರ್ಟ್‌ ನಕಾರ

KannadaprabhaNewsNetwork | Published : Nov 5, 2024 1:32 AM

ಸಾರಾಂಶ

ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ ಎನ್ನಲಾದ ವ್ಯಕ್ತಿಯ ಮನೆಯಿಂದ ನಗರದ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು 1437600 ರು. ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಕ್ರಿಮಿನಲ್ ‌ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಅರ್ಜಿದಾರರಿಗೆ 10 ಸಾವಿರ ರು. ದಂಡ ವಿಧಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ ಎನ್ನಲಾದ ವ್ಯಕ್ತಿಯ ಮನೆಯಿಂದ ನಗರದ ಕೆ.ಜಿ.ಹಳ್ಳಿ ಠಾಣಾ ಪೊಲೀಸರು ವಶಪಡಿಸಿಕೊಂಡಿರುವ ಒಟ್ಟು 1437600 ರು. ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಆರೋಪಿಯ ತಂದೆ ಸಲ್ಲಿಸಿದ್ದ ಕ್ರಿಮಿನಲ್ ‌ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಅರ್ಜಿದಾರರಿಗೆ 10 ಸಾವಿರ ರು. ದಂಡ ವಿಧಿಸಿದೆ.

ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಶೇಕ್‌ ಇಜಾಜ್‌ ಅಲಿ ಅವರ ತಂದೆ ಕಲಬುರಗಿಯ ಶೇಕ್‌ ಸಾದಿಕ್‌ ಅಲಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಮುದಗಲ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿಸ್ತೃತ ಆದೇಶವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ವಿಚಾರಣೆ ವೇಳೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್‌, ಆರೋಪಿ ಶೇಕ್‌ ಇಜಾಜ್‌ ಅಲಿ ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಉಗ್ರ ಚಟುವಟಿಕೆಗೆ ಬಳಸಲು ವಿವಿಧ ಮೂಲದಿಂದ 143760 ಹಣ ಸಂಗ್ರಹಿಸಿದ್ದಾನೆ. ಈ ಅಂಶ ಸಾಬೀತುಪಡಿಸಲು ತನಿಖಾಧಿಕಾರಿಗಳ ಬಳಿ ಸಾಕ್ಷ್ಯವಿದೆ. ಒಂದೊಮ್ಮೆ ಆರೋಪಿಯ ತಂದೆಯ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ, ಆರೋಪಿಯ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಸ್ತುಪಡಿಸಲು ಅಡ್ಡಿ ಉಂಟು ಮಾಡಿದಂತಾಗುತ್ತದೆ ಎಂದು ವಾದಿಸಿದ್ದರು. ಹಾಗೆಯೇ, ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ತೀರ್ಮಾನ ಮಾಡುವ ಮುನ್ನವೇ ಇಡೀ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿಲ್ಲ ಎಂಬುದನ್ನೂ ಹೈಕೋರ್ಟ್‌ ಈಗಲೇ ನಿರ್ಧರಿಸಿದಂತಾಗುತ್ತದೆ. ಪೊಲೀಸರು ಜಪ್ತಿ ಮಾಡಿರುವ ಹಣ ಹೂ-ಹಣ್ಣು ಮಾರಾಟ ಮಾಡಿದ ಹಣ ಎಂದು ಆರೋಪಿ ತಂದೆ, ಕೆಲ ಪ್ರಮಾಣ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಅದರಲ್ಲಿ ಹಣ ಸಂಪಾದಿಸಿರುವ ಸಮಯ ಹಾಗೂ ದಿನಾಂಕದ ವಿವರ ಒದಗಿಸಿಲ್ಲ. ಹೂ-ಹಣ್ಣು ಮಾರಾಟ ಮಾಡಿ ಇಷ್ಟು ಹಣ ಸಂಪಾದಿಸಿರುವುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಅರ್ಜಿದಾರರು ಸಲ್ಲಿಸಿಲ್ಲ. ಆರೋಪಿ ಕೃತ್ಯವನ್ನು ವಿಚಾರಣಾ ನ್ಯಾಯಾಲಯದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಸಾಬೀತುಪಡಿಸಲಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರುಪ್ರಕರಣದ ವಿವರ: ಆರೋಪಿ ಇಜಾಜ್‌ ಅಲಿ ಮನೆ ಕಲಬುರಗಿಯ ಮನೆಯ ಮೇಲೆ 2022ರ ಸೆ.22ರಂದು ದಾಳಿ ನಡೆಸಿದ್ದ ಕೆ.ಜಿ. ಹಳ್ಳಿ ಠಾಣಾ ಪೊಲೀಸರು, ಆತ ಭಯೋತ್ಪಾದನೆ ಕೃತ್ಯ ಎಸಗಲು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ಎನ್ನಲಾದ 1437600 ರು. ಜಪ್ತಿ ಮಾಡಿದ್ದರು. ಪ್ರಕರಣವನ್ನು 49ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ಆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿಯ ತಂದೆ ಸಾದಿಕ್‌ ಅಲಿ, ತಾನು ಹೂ-ಹಣ್ಣು ವ್ಯಾಪಾರ ಮಾಡಿ ಸಂಪಾದನೆ ಮಾಡಿದ್ದ 1437600 ರು. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಹಣ ಬಿಡುಗಡೆಗೆ ಆದೇಶಿಸುವಂತೆ ಕೋರಿದ್ದರು. ಆ ಅರ್ಜಿ ವಜಾಗೊಳಿಸಿ 2023ರ ಡಿ.16ರಂದು ಅಧೀನ ನ್ಯಾಯಾಲಯ ಆದೇಶಿಸಿತ್ತು. ಇದರಿಂದ ಸಾದಿಕ್‌ ಅಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Share this article