ಕನ್ನಡ ಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಹೋಬಳಿ ರಾಂಪುರ ಗ್ರಾಮದ ರೈತ ಚಂದ್ರಶೇಖರ್ ಅವರ ಸೇವಿಂಗ್ಸ್ ಖಾತೆಯಲ್ಲಿದ್ದ 1,60,79,890 ರು. ಗಳನ್ನು ಗ್ರಾಹಕರ ಗಮನಕ್ಕೆ ಬಾರದೇ ಯುಪಿಐ ಸಂಪರ್ಕ ಸಾಧಿಸಿ ವಂಚಕರು ಪಂಗನಾಮ ಹಾಕಿದ್ದಾರೆ. ಈ ಪ್ರಕರಣ ಕುರಿತು ಚಂದ್ರಶೇಖರ್ ಮಂಡ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಹಿಂದೆ ಚಂದ್ರಶೇಖರ್ ಮದ್ದೂರಿನ ಟಿಎಪಿಸಿಎಂಎಸ್ ಕಟ್ಟಡದಲ್ಲಿದ್ದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದು ಹಣಕಾಸಿನ ವ್ಯವಹಾರ ಮಾಡುತ್ತಿದ್ದರು. ಆ ನಂತರ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನಲ್ಲಿ ವಿಲೀನಗೊಂಡ ಬಳಿಕ ಖಾತೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಈ ಬ್ಯಾಂಕ್‌ನಲ್ಲಿ ವ್ಯವಹಾರ ನಡೆಸುತ್ತಿದ್ದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಚಂದ್ರಶೇಖರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಆನ್‌ಲೈನ್ ವಂಚಕರು ಯುಪಿಐ ಕೋಡ್ ಬಳಸಿ ಕಳೆದ ಜುಲೈ 24ರಂದು ಅವರ ಖಾತೆಯಲ್ಲಿದ್ದ 1 ಕೋಟಿ 10 ಲಕ್ಷ, ಆ ನಂತರ ಜುಲೈ 27 ರಂದು 49, 99,299.99 ಲಕ್ಷ ಸೇರಿದಂತೆ 1.60 ಲಕ್ಷ ದ 798 ರು.ಗಳನ್ನು ಯುಪಿಐ ಕೋಡ್ ಬಳಸಿ ಆನ್ ಲೈನ್ ಮೂಲಕ ಹಂತ ಹಂತವಾಗಿ ಲಪಟಾಯಿಸಲಾಗಿದೆ ಎಂದು ರೈತ ಚಂದ್ರಶೇಖರ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ದಿನಸಿ ಅಂಗಡಿಗಳಲ್ಲಿ ಕಳ್ಳತನ
ಪಟ್ಟಣದ ಹೆಗ್ಗಡಹಳ್ಳಿ ರಾಮಕೃಷ್ಣೇಗೌಡರಿಗೆ ಸೇರಿದ ಜನತಾಭಂಡಾರ ದಿನಸಿ ಅಂಗಡಿಯಲ್ಲಿ ಬೀಗ ಮುರಿದು ಒಳನುಗ್ಗಿರುವ ಕಳ್ಳರು 9 ಸಾವಿರ ನಗದು, ಸನ್ ಪ್ಯೂರ್ ಎಣ್ಣೆ 15 ಬಾಕ್ಸ್, 5 ಲೀಟರ್ 13 ಕ್ಯಾನ್, ರುಚಿಗೋಲ್ಡ್ 8 ಬಾಕ್ಸ್, ಬಾದಾಮಿ ಸೇರಿದಂತೆ ಇತರೆ ಪದಾರ್ಥಗಳನ್ನು ಕದ್ದಿದ್ದಾರೆ.
ಬೆಳಗಿನ ಜಾವಾ 3 ಗಂಟೆ 50 ನಿಮಿಷದಲ್ಲಿ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಶರತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಾಂಡವಪುರದಲ್ಲಿ ರಾತ್ರಿಯಿಡೀ ಮಳೆ ಬಿದ್ದುದನ್ನು ಕಳ್ಳರು ಉಪಯೋಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ.