ದರ್ಶನ್‌ ಕೇಸ್‌: ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ

Published : Sep 29, 2026, 11:20 AM IST
darshan case in pradosh

ಸಾರಾಂಶ

ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್‌ ಸೋಮವಾರ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಖುದ್ದು ಹಾಜರಾಗಿ ತನ್ನ ಸಾಕ್ಷ್ಯ ದಾಖಲಿಸಿದ್ದಾರೆ.

ಬೆಂಗಳೂರು: ನಟ ದರ್ಶನ್‌ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದು, ಮಾಫಿ ಸಾಕ್ಷಿಯಾಗಿರುವ 14ನೇ ಆರೋಪಿ ಪ್ರದೂಷ್‌ ಸೋಮವಾರ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಖುದ್ದು ಹಾಜರಾಗಿ ತನ್ನ ಸಾಕ್ಷ್ಯ ದಾಖಲಿಸಿದ್ದಾರೆ.

ಪ್ರಕರಣದ ವಿಚಾರಣೆಯನ್ನು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರಾದ ಸುಜಾತಾ ಎಂ.ಸಾಂಬ್ರಾಣಿ ಸೋಮವಾರ ಮುಂದುವರಿಸಿದರು. ಕಾಮಾಕ್ಷಿಪಾಳ್ಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳು ಜೈಲಿನಿಂದ ಮಾಫಿ ಸಾಕ್ಷಿಯಾಗಿರುವ ಪ್ರದೂಷ್‌ರನ್ನು ಬಿಗಿ ಭದ್ರತೆಯೊಂದಿಗೆ ಕರೆತಂದು ಸೋಮವಾರ ಬೆಳಗ್ಗೆ ಸುಮಾರು 11.10ರ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ವೇಳೆ ದರ್ಶನ್‌ ಪರ ವಕೀಲರು ಹಾಜರಾಗಿ, ಪ್ರದೂಷ್‌ರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವ ಈ ನ್ಯಾಯಾಲಯದ ಆದೇಶವನ್ನು ಸುಪ್ರಿಂ ಕೋರ್ಟ್‌ ಮುಂದೆ ಪ್ರಶ್ನಿಸಲು 2 ದಿನಗಳ ಕಾಲ ಪ್ರದೂಷ್‌ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡುವಂತೆ ಕೋರಿ ಮತ್ತೆ ಮೊಮೊ ಸಲ್ಲಿಸಿದರು. ಆದರೆ, ಈ ಮನವಿಗೆ ತೀವ್ರವಾಗಿ ಆಕ್ಷೇಪಿಸಿದ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌, ದರ್ಶನ್‌ ಮೆಮೊ ತಿರಸ್ಕರಿಸಲು ಕೋರಿದರು.

ಅದರಂತೆ ಪ್ರಕರಣದ ತ್ವರಿತ ವಿಚಾರಣೆಗೆ ಸುಪ್ರಿಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಿ ದರ್ಶನ್‌ ಮೆಮೊವನ್ನು ನ್ಯಾಯಾಲಯ ತಿರಸ್ಕರಿಸಿತು.

ಇನ್‌-ಕ್ಯಾಮರಾ ಪ್ರೊಸಿಡಿಂಗ್ಸ್‌:

ಪ್ರಕರಣದ ಸೂಕ್ಷ್ಮತೆ ಮತ್ತು ಕೋರ್ಟ್‌ನಲ್ಲಿ ಜನಸಂದಣಿ ಕಡಿಮೆ ಮಾಡಲು ಇನ್‌-ಕ್ಯಾಮರಾ ಪ್ರೊಸೀಡಿಂಗ್ಸ್‌ನಲ್ಲಿ ನ್ಯಾಯಾಲಯ ಪ್ರದೂಷ್‌ ಸಾಕ್ಷ್ಯ ದಾಖಲಿಸಿಕೊಂಡಿತು. ಸಂಜೆ ವೇಳೆಗೆ ಪ್ರದೂಷ್‌ ಸಾಕ್ಷ್ಯ ದಾಖಲು ಪ್ರಕ್ರಿಯೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು. ಹಾಗೆಯೇ, ಮಂಗಳವಾರವು ಪ್ರದೂಷ್‌ ಅವರನ್ನು ಖುದ್ದಾಗಿ ವಿಚಾರಣೆಗೆ ಹಾಜರುಪಡಿಸಬೇಕು ಎಂದು ಕಾಮಾಕ್ಷಿಪಾಳ್ಯ ಪೊಲಿಸ್‌ ಇನ್ಸ್‌ಪೆಕ್ಟರ್‌ ಮತ್ತು ಜೈಲು ಅಧಿಕಾರಿಗಳಿಗೆ ಸೂಚಿಸಿತು.

ಮತ್ತೊಂದೆಡೆ ಹೈಕೋರ್ಟ್‌ ನಿರ್ದೇಶನದಂತೆ ಸೋಮವಾರ ಪವಿತ್ರಾ ಗೌಡ ಮತ್ತು ದರ್ಶನ್‌ ಸೇರಿ ಪ್ರಕರಣದ ಒಟ್ಟು 6 ಆರೋಪಿಗಳನ್ನು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಮಂಗಳವಾರ ಸಹ ಈ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಪಡಿಸಲು ನ್ಯಾಯಾಲಯ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್ ಗೆ ಅರ್ಜಿ

ಸೆಷನ್ಸ್‌ ಕೋರ್ಟ್‌ ಆದೇಶದ ಬೆನ್ನಲ್ಲೇ ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಅವರು ಹೈಕೋರ್ಟ್‌ ಮುಂದೆ ಹಾಜರಾಗಿ, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುತ್ತದೆ. ಹೀಗಾಗಿ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಮೂರು ದಿನ ಕಾಲ ಪ್ರದೂಷ್ ಸಾಕ್ಷ್ಯ ದಾಖಲು ಪ್ರಕ್ರಿಯೆ ಮುಂದೂಡಲು ಸೆಷನ್ಸ್‌ ಕೋರ್ಟ್‌ಗೆ ನಿರ್ದೇಶಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರು, ಪ್ರಕರಣವು ವಿಶೇಷ ಎಂದು ಏನೂ ಕಾಣುತ್ತಿಲ್ಲ ಎಂದು ತಿಳಿಸಿ ದರ್ಶನ್‌ ಪರ ವಕೀಲರ ಮನವಿ ತಿರಸ್ಕರಿಸಿದರು.

ಮಾಫಿ ಸಾಕ್ಷಿಯಾಗಲು ಕೋರಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಹಲವು ಅಂಶಗಳ ಬಗ್ಗೆ ಸಾಕ್ಷ್ಯ :

ಪ್ರದೂಷ್‌ ತನ್ನ ಕುಟುಂಬ ಹಾಗೂ ಶೈಕ್ಷಣಿಕ ಹಿನ್ನೆಲೆ, ದರ್ಶನ್‌ ಜೊತೆಗಿನ ಪರಿಚಯ-ಸ್ನೇಹ, ರೇಣುಕಾಸ್ವಾಮಿ ಕೊಲೆ ನಡೆದ ದಿನದಂದು ದರ್ಶನ್‌ ಜೊತೆಗೆ ರಾಜರಾಜೇಶ್ವರಿ ನಗರದ ಮನೆಯಿಂದ ಸ್ಟೋನಿ ಬ್ರೂಕ್ಸ್‌ ಪಬ್‌ ಮತ್ತು ರೆಸ್ಟೋರೆಂಟ್‌ಗೆ ಹೋಗಿ, ಊಟ ಮುಗಿಸಿದ ನಂತರ ಅಲ್ಲಿಂದ ಪಟ್ಟಣಗೆರೆ ಶೆಡ್‌ಗೆ ತೆರಳಿದ, ಶೆಡ್‌ನಲ್ಲಿ ಅಲ್ಲಿ ರೇಣುಕಾಸ್ವಾಮಿ ಮೇಲೆ ದರ್ಶನ್‌ ನಡೆಸಿದ ಹಲ್ಲೆ, ಪವಿತ್ರಾ ಗೌಡ ಚಪ್ಪಲಿಯಲ್ಲಿ ಕೆನ್ನೆಗೆ ಟಚ್‌ ಮಾಡಿದ, ಆಕೆ ಕಾಲಿಗೆ ಬಿದ್ದು ರೇಣುಕಾಸ್ವಾಮಿ ಕ್ಷಮೆ ಕೋರಿದ, ಆತನಿಗೆ ಇತರೆ ಆರೋಪಿಗಳು ಹೊಡೆದು ಕರೆಂಟ್‌ ಶಾಕ್‌ ನೀಡಿದ ಬಗ್ಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಅಂಶಗಳ ಕುರಿತು ಪ್ರದೂಷ್‌ ನ್ಯಾಯಾಲಯದ ಮುಂದೆ ಸಾಕ್ಷ್ಯ ದಾಖಲಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಲೋಕಾದಿಂದ ಸ್ಟೋನ್ ಕ್ರಷರ್ ಸೇರಿ ೨೨ ಸ್ವಯಂ ಪ್ರೇರಿತ ಪ್ರಕರಣ ದಾಖಲು
ರಿಯಾಲ್‌ ಆಸೆ ತೋರಿಸಿ ವ್ಯಾಪಾರಿಗೆ 8 ಲಕ್ಷ ರು, ವಂಚನೆ