ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಭ್ರೂಣ ಹತ್ಯೆ ಹಾಗೂ ಕಾನೂನು ಬಾಹಿರ ಗರ್ಭಪಾತ ಪ್ರಕರಣದ ತನಿಖೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನಡುವಿನ ಭಿನ್ನಾಭಿಪ್ರಾಯ, ಜಟಾಪಟಿ ಕುರಿತ ತನಿಖೆಗೆ ಸರ್ಕಾರ ಮೂವರು ಅಧಿಕಾರಿಗಳ ನೇತೃತ್ವದ ತಂಡ ರಚಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನಾ ನಿರ್ದೇಶಕರು (ಆರ್‌ಸಿಎಚ್), ಉಪ ನಿರ್ದೇಶಕರು (ವೈದ್ಯಕೀಯ/ಪಿಸಿ ಪಿಎನ್‌ಡಿಪಿ), ಉಪ ನಿರ್ದೇಶಕರು (ಕುಟುಂಬ ಕಲ್ಯಾಣ) ಈ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿರುವ ಇಲಾಖೆ, ಭ್ರೂಣ ಹತ್ಯೆ ಹಾಗೂ ಕಾನೂನು ಬಾಹಿರ ಗರ್ಭಪಾತ ನಡೆದಿರುವ ಆರೋಪವಿರುವ ಜಿಲ್ಲೆಯ ಹೊಸಕೋಟೆ ನಗರದ ಎಸ್‌ಪಿಜಿ ಆಸ್ಪತ್ರೆ, ಓವಮ್ ಆಸ್ಪತ್ರೆ ಹಾಗೂ ನೆಲಮಂಗಲದ ಅಸರಾ ಆಸ್ಪತ್ರೆಗಳಿಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗಳಿಗೆ ಭೇಟಿ ನೀಡಿ ಪ್ರಕರಣದ ಎಲ್ಲ ವಾಸ್ತವಾಂಶಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ದಾಖಲೆಗಳೊಂದಿಗೆ ಮಾ.26ರೊಳಗೆ ವರದಿ ಸಲ್ಲಿಸಲು ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದ ತನಿಖೆ ಕೈಗೊಂಡಿದ್ದ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ। ಎಸ್.ಆರ್.ಮಂಜುನಾಥ ಅವರು, ಆರೋಪವಿರುವ ಆಸ್ಪತ್ರೆಗಳಲ್ಲಿನ ಅನಧಿಕೃತ ಕಾರ್ಯಗಳ ಬಗ್ಗೆ ವರದಿ ಸಲ್ಲಿಸುವ ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಂದ ತಮ್ಮ ಕರ್ತವ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ರಜೆ ಮೇಲೆ ತೆರಳಲು ಅನುಮತಿ ನೀಡಬೇಕೆಂದು ಇಲಾಖೆಯನ್ನು ಕೋರಿದ್ದರು.ಅಲ್ಲದೆ, ಅಧಿಕಾರಿಯ ಒತ್ತಡದಿಂದ ನಾನು ಸತ್ತರೆ ಅದಕ್ಕೇ ಅವರೇ ಕಾರಣ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಯು ಆಸ್ಪತ್ರೆಯ ಅಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ಒದಗಿಸಿಲ್ಲ. ಆ ಅಧಿಕಾರಿಯ ಸೇವೆ ಅಗತ್ಯವಿಲ್ಲ, ವರ್ಗಾವಣೆ ಮಾಡುವಂತೆ ಇಲಾಖೆಯನ್ನು ಕೋರಿದ್ದರು. ತನ್ಮೂಲಕ ಈ ಇಬ್ಬರ ನಡುವೆ ಬಿನ್ನಾಭಿಪ್ರಾಯ, ಜಟಾಪಟಿ ಏರ್ಪಟ್ಟಿತ್ತು.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಮತ್ತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನಡುವಿನ ಭಿನ್ನಾಭಿಪ್ರಾಯ, ಆಪಾದನೆಗಳ ಬಗ್ಗೆ ತನಿಖೆಗೆ ಯೋಜನಾ ನಿರ್ದೇಶಕರ ನೇತೃತ್ವದ ತಂಡವನ್ನು ರಚಿಸಲಾಗಿದೆ.