ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆ.ಆರ್.ಪುರದ ರೋಸೆಲಿಮೆ, ಚಿಕ್ಕಬಳ್ಳಾಪುರ ಜಿಲ್ಲೆಯ ಖದೀರ್ ಪಾಷ, ಮಹಮ್ಮದ್ ಅಲಿ, ಅಜಯ್, ಹರೀಶ್, ವೀರೇಶ ನಗರದ ಶ್ರೀಕಾಂತ್, ನೃಪತುಂಗ ರೆಸಿಡೆನ್ಸಿಯಲ್ ಲೇಔಟ್‌ನ ಮುನಿರಾಜು, ಬೇಗೂರಿನ ಚಾಮುಂಡೇಶ್ವರಿ ನಗರದ ಚಂದ್ರಕಾಂತ್, ಆನೇಕಲ್ ತಾಲೂಕಿನ ಜಿಗಣಿ ವಿ.ಬಾಲಕೃಷ್ಣ, ಪಶ್ಚಿಮ ಬಂಗಾಳದ ಹಲ್ಮಿಮ್ ಮಂಡಲ್ ಹಾಗೂ ಸನರುಲ್ ಶೇಕ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ ₹ 25 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಸಿಸಿಬಿ, ಯಲಹಂಕ, ಅಮೃತಹಳ್ಳಿ, ಅಶೋಕನಗರ ಹಾಗೂ ಕೊಡಿಗೇಹಳ್ಳಿ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಒಣ ಮೀನು, ದಿನಸಿಯಲ್ಲಿ ಮಾರುತ್ತಿದ್ದ ₹24 ಕೋಟಿ ಡ್ರಗ್ಸ್ ಜಪ್ತಿಕೆ.ಆರ್.ಪುರ ಸಮೀಪದ ‘ನೈಜಿರಿಯನ್ ಕಿಚನ್’ ಹೆಸರಿನ ಅಂಗಡಿ ತೆರೆದು ದಿನಸಿ ಪದಾರ್ಥಗಳಲ್ಲಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆ ಬಂಧಿಸಿ 24 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಮುಂಬೈ ನಗರದಲ್ಲಿರುವ ಆಫ್ರಿಕಾ ಮೂಲದ ಮಹಿಳಾ ಪೆಡ್ಲರ್ ಬಳಿ ಡ್ರಗ್ಸ್ ಖರೀದಿಸಿ ನಗರಕ್ಕೆ ತರುತ್ತಿದ್ದ ಈಕೆ, ತರುವಾಯ ಒಣ ಮೀನು, ಅಕ್ಕಿ, ಹೆಸರುಬೇಳೆ ಹಾಗೂ ಸೋಪು ಸೇರಿ ಇತರೆ ವಸ್ತುಗಳಲ್ಲಿ ಡ್ರಗ್ಸ್ ಅಡಗಿಸಿ ಗ್ರಾಹಕರಿಗೆ ಮಾರುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್ ಭರತ್ ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಹೊಸ ವರ್ಷದ ಪಾರ್ಟಿ ಮತ್ತೇರಿಸಲು ನೆರೆ ರಾಜ್ಯದಿಂದ ಸಿನಿಮೀಯ ಶೈಲಿಯಲ್ಲಿ ಗಾಂಜಾ ಪೂರೈಸುತ್ತಿದ್ದ ನಾಲ್ವರು ಯಲಹಂಕ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಖದೀರ್ ಪಾಷ, ಮಹಮ್ಮದ್ ಅಲಿ, ಅಜಯ್, ಹರೀಶ್ ಬಂಧಿತರಾಗಿದ್ದು, ಆರೋಪಿಗಳಿಂದ ₹74.53 ಲಕ್ಷ ಮೌಲ್ಯದ 93 ಕೆಜಿ ಗಾಂಜಾ, ಟ್ರಕ್ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬಳಿಕ ಸರಕು ಸಾಗಾಣಿಕೆ ವಾಹನದಲ್ಲಿ ತುಂಬಿಕೊಂಡು ನಗರಕ್ಕೆ ಆರೋಪಿಗಳು ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಯಿತು.
ಪರಪ್ಪನ ಅಗ್ರಹಾರ ಜೈಲಿನಿಂದಲೇ ಡ್ರಗ್ಸ್ ಡೀಲ್ :
ಇನ್ನು ಅದೇ ರೀತಿ ನಗರದಲ್ಲಿ ಗಾಂಜಾ ಮಾರಾಟಕ್ಕಿಳಿದಿದ್ದ ಮೂವರು ಪೆಡ್ಲರ್‌ಗಳನ್ನು ಬಾಣಸವಾಡಿ ಪೊಲೀಸರು ಹಾಗೂ ಒಬ್ಬನನ್ನು ಅಮೃತಹಳ್ಳಿ ಪೊಲೀಸರು ಪ್ರತ್ಯೇಕವಾಗಿ ಸೆರೆ ಹಿಡಿದಿದ್ದಾರೆ. ಆರೋಪಿಗಳಿಂದ 16.5 ಲಕ್ಷ ರು ಗಾಂಜಾ ಜಪ್ತಿಯಾಗಿದೆ. ಈ ಪೆಡ್ಲರ್‌ಗಳು ಕೂಡ ಹೊರ ರಾಜ್ಯದಿಂದ ಗಾಂಜಾವನ್ನು ನಗರಕ್ಕೆ ಪೂರೈಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.