ಕೋಳಿ ವ್ಯಾಪಾರಿ ಬಳಿ ₹29 ಕೋಟಿ ಡ್ರಗ್ಸ್‌ ಪತ್ತೆ

Published : Aug 11, 2026, 05:52 AM IST
drugs

ಸಾರಾಂಶ

ಡ್ರಗ್ಸ್ ಮಾಫಿಯಾ ವಿರುದ್ಧ ‘ಆಪರೇಷನ್‌ ರೈಸ್‌’ ಅಭಿಯಾನದಡಿ ಬೃಹತ್ ಕಾರ್ಯಾಚರಣೆ ನಡೆಸಿರುವ ರಾಜಧಾನಿ ಪೊಲೀಸರು, 8 ವಿದೇಶಿಯರು ಸೇರಿ 39 ಪೆಡ್ಲರ್‌ಗಳನ್ನು ಸೆರೆಹಿಡಿದು 55 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಬೆಂಗಳೂರು : ಡ್ರಗ್ಸ್ ಮಾಫಿಯಾ ವಿರುದ್ಧ ‘ಆಪರೇಷನ್‌ ರೈಸ್‌’ ಅಭಿಯಾನದಡಿ ಬೃಹತ್ ಕಾರ್ಯಾಚರಣೆ ನಡೆಸಿರುವ ರಾಜಧಾನಿ ಪೊಲೀಸರು, 8 ವಿದೇಶಿಯರು ಸೇರಿ 39 ಪೆಡ್ಲರ್‌ಗಳನ್ನು ಸೆರೆಹಿಡಿದು 55 ಕೋಟಿ ರು.ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳ, ಅಮೃತಹಳ್ಳಿ, ಗಿರಿನಗರ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಯಶವಂತಪುರ, ಹೆಬ್ಬಾಳ, ನಂದಿನಿಲೇಔಟ್‌, ಕಾಡುಗೋಡಿ, ಮಲ್ಲೇಶ್ವರ, ಗೋವಿಂದಪುರ, ಬಾಗಲೂರು, ಮಹದೇವಪುರ, ಮಹಾಲಕ್ಷ್ಮೀ ಲೇಔಟ್‌, ಬೇಗೂರು ಹಾಗೂ ಕೊತ್ತನೂರು ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಗಳಿಂದ 21 ಕೆಜಿ 641 ಗ್ರಾಂ ಎಂಡಿಎಂ, 738 ಗ್ರಾಂ ಕೊಕೇನ್‌, 4.493 ಕೆಜಿ ಹೈಡ್ರೋ ಗಾಂಜಾ, 184.625 ಕೆಜಿ ಗಾಂಜಾ, 1.65 ಕೆಜಿ ಅಫೀಮು ಹಾಗೂ 25 ಗ್ರಾಂ ಮಾರ್ಫಿನ್ ಸೇರಿದಂತೆ 29.07 ಕೋಟಿ ಮೌಲ್ಯದ ಡ್ರಗ್ಸ್ ವಶವಾಗಿದೆ. ಇದಲ್ಲದೆ 17 ಲಕ್ಷ ರು ನಗದು, 22 ಮೊಬೈಲ್‌ಗಳು ಹಾಗೂ 5 ಬೈಕ್‌ಗಳನ್ನು ಕೂಡ ಡ್ರಗ್ಸ್ ದಂಧೆಕೋರರಿಂದ ಪೊಲೀಸರು ಜಪ್ತಿ ಮಾಡಿದ್ದಾರೆ.

ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ ಡ್ರಗ್ಸ್‌ನ ಪ್ರಸುತ್ತ ಮಾರುಕಟ್ಟೆ ಮೌಲ್ಯ 55.80 ಕೋಟಿ ರು.ಇದೆ. ದಾಳಿ ವೇಳೆ ಪೈಕಿ 8 ವಿದೇಶಿಯರು, 21 ಹೊರ ರಾಜ್ಯದವರು ಹಾಗೂ 10 ಮಂದಿ ಸ್ಥಳೀಯರು ಸೇರಿ ಒಟ್ಟು 39 ಜನರ ಬಂಧನವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ಹೆಚ್ಚಿನ ಹಣ ಸಂಪಾದಿಸುವ ದುರುದ್ದೇಶದಿಂದ ವಿದೇಶ ಹಾಗೂ ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಗುರಿಯಾಗಿಸಿ ಕೆಲವರು ಮಾರಾಟ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ವಿದೇಶಿ ದಂಧೆಕೋರರನ ಬಳಿ 10 ಕೋಟಿ ಡ್ರಗ್ಸ್ ಜಪ್ತಿ:

ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸೆರೆ ಹಿಡಿದು 10.36 ಕೋಟಿ ರು.ಮೌಲ್ಯದ ಡ್ರಗ್ಸ್ ಅನ್ನು ಗಿರಿನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ರಿಪಬ್ಲಿಕ್ ಐವರಿ ಕೋಸ್ಟಾದ ದೆಂಬೆ ಝೂಮಾ ಫ್ರಾನ್ಸಿಕ್ಸ್‌ ಬಲೆಗೆ ಬಿದ್ದಿದ್ದು, ಆತನಿಂದ 5.1 ಕೆಜಿ ಎಂಡಿಎಂಎ ನನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ದೆಂಬೆ, ಆನಂತರ ನಗರಕ್ಕೆ ಬಂದು ಹೆಸರಘಟ್ಟ ಬಳಿ ನೆಲೆಸಿದ್ದ. ತನ್ನ ಆಫ್ರಿಕಾ ಸ್ನೇಹಿತರ ಮೂಲಕ ಡ್ರಗ್ಸ್ ತಂದು ನಗರದಲ್ಲಿ ಆತ ಬಿಕರಿ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಪಿಐ ಮಂಜುನಾಥ್ ಹಾಗೂ ಪಿಎಸ್‌ಐ ಮಂಜುನಾಥ್ ತಂಡ ದಾಳಿ ನಡೆಸಿದೆ.

ಸಿಸಿಬಿ ದಾಳಿಯಲ್ಲಿ 8.88 ಕೋಟಿ ಡ್ರಗ್ಸ್‌ ಜಪ್ತಿ:

ಡ್ರಗ್ಸ್ ಮಾಫಿಯಾದ ವಿರುದ್ಧ ಸಿಸಿಬಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ವಿದೇಶಿಯರು ಸೇರಿದಂತೆ ನಾಲ್ವರು ಗಾಳಕ್ಕೆ ಬಿದ್ದಿದ್ದಾರೆ. ಕ್ಯಾಮರೂನ್ ದೇಶದ ವಿಕ್ಟರ್‌ ಕ್ಯಾಲೆಬ್‌, ನೈಜೀರಿಯಾದ ಹೆನ್ರಿ ಚಿಂದಿಂದು, ಫಾಯೆ ಹಾಗೂ ಕಿರಣ್ ಕುುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ 82.3 ಕೆಜಿ ಗಾಂಜಾ, 738 ಗ್ರಾಂ ಕೊಕೇನ್‌ ಹಾಗೂ 336 ಗ್ರಾಂ ಎಂಡಿಎಂಎ ಸೇರಿ ಒಟ್ಟು 8.88 ಕೋಟಿ ಡ್ರಗ್ಸ್ ಜಪ್ತಿಯಾಗಿದೆ.

ಹಲವು ದಿನಗಳಿಂದ ನಗರದಲ್ಲಿ ಈ ನಾಲ್ವರು ಪ್ರತ್ಯೇಕವಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಬಾತ್ಮಿ ಕಲೆ ಹಾಕಿ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಎಲ್‌.ವೈ.ರಾಜೇಶ್‌ ಸಾರಥ್ಯದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಎಂ.ಎಲ್.ಸುಬ್ರಮಣ್ಯಸ್ವಾಮಿ, ವಿ.ಡಿ.ಶಿವರಾಜು ಹಾಗೂ ಪ್ರವೀಣ್.ಸಿ.ಯಲಿಗಾರ್ ತಂಡ ದಾಳಿ ನಡೆಸಿದೆ. ಎರಡು ವರ್ಷಗಳಿಂದ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ ಈ ವಿದೇಶಿ ಪೆಡ್ಲರ್‌ಗಳು, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾರಾಟ ದಂಧೆಯಲ್ಲಿ ಆರೋಪಿಗಳು ತೊಡಗಿದ್ದರು.

ಯಲಹಂಕ, ಯಶ‍ವಂತಪುರ ಪೊಲೀಸರಿಗೆ ಕೋಟಿ ಡ್ರಗ್ಸ್ ಜಪ್ತಿ

ಇನ್ನು ಯಲಹಂಕ ಹಾಗೂ ಯಶವಂತಪುರ ಪೊಲೀಸರು ಕೂಡ ಪ್ರತ್ಯೇಕ ದಾಳಿ ನಡೆಸಿ ಕೋಟಿ ಗಟ್ಟಲೇ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.ಉತ್ತರಪ್ರದೇಶದ ಆಕೊಲಿಸಾ ಎವೆರಿಸ್ಟಿಸ್, ಮೊಹಮ್ಮದ್‌ ಅಜ್ರೂಲ್‌ ಹಕ್‌, ಕೇರಳ ಮೂಲದ ಅಬ್ದುಲ್ ಲತೀಫ್ ಹಾಗೂ ಸೈಫುದ್ದೀನ್ ಮೊಹಮ್ಮದ್‌ನನ್ನು ಯಶವಂತಪುರ ಉಪ ವಿಭಾಗದ ಎಸಿಪಿ ರೇಣುಕಾ ಪ್ರಸಾದ್ ಹಾಗೂ ಶಿವಕುಮಾರ್ ತಂಡ ಬಂಧಿಸಿದೆ. ಪೆಡ್ಲರ್‌ಗಳಿಂದ 1.71 ಕೋಟಿ ರು ಬೆಲೆಯ 650 ಗ್ರಾಂ ಎಂಡಿಎಂಎ ಹಾಗೂ 41 ಕೆಜಿ ಗಾಂಜಾ ಜಪ್ತಿಯಾಗಿದೆ.

ಇನ್ನೊಂದೆಡೆ ಯಲಹಂಕ ಉಪ ವಿಭಾಗದ ಎಸಿಪಿ ವಿಜಯ್ ಹಡಗಲಿ ಮುಂದಾಳತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಿಜಾರೋಂ ರಾಜ್ಯದ ಜಸ್ಟಿನ್‌ ಲಾಲ್ರೊಹ್ಲಾ, ತೆಝೆನ್‌ ಪಲ್ಜೊರ್‌, ಅರ್ಫಾತ್‌ ಪಾಷ, ಹಾಗೂ ಶೇಕ್ ಸಕ್ಲೇನ್‌ ಸೆರೆಯಾಗಿದ್ದಾರೆ. ಈ ಆರೋಪಿಗಳಿಂದ 1.59 ಕೋಟಿ ರು ಮೌಲ್ಯದ 794 ಗ್ರಾಂ ಎಂಡಿಎಂಎ ಮುಟ್ಟುಗೋಲಾಗಿದೆ.

ನೈಜಿರಿಯಾ ವ್ಯಾಪಾರಿ ಮೂಲಕ ಕೋಳಿ ವ್ಯಾಪಾರಿ ಡ್ರಗ್ಸ್‌ ಧಂಧೆ

ಮಾದಕ ವಸ್ತು ಮಾರಾಟ ದಂಧೆ ವಿರುದ್ಧ ಅಮೃತಹಳ್ಳಿ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಳಿ ಮಾಂಸ ಮಾರಾಟಗಾರ ಸೇರಿದಂತೆ ಇಬ್ಬರನ್ನು ಸೆರೆ ಹಿಡಿದು 28.88 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ದೆಹಲಿ ಮೂಲದ ಅಮಿನ್ ಸಿಂಗ್ ಹಾಗೂ ನೈಜೀರಿಯಾದ ಒಬಾಮ್ ಬಂಧಿತರಾಗಿದ್ದು, ಆರೋಪಿಗಳಿಂದ 14.4 ಕೆಜಿ ಎಂಡಿಎಂಎ ಅನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಲ್ಲಿ ಕುಳಿತು ಅಮಿನ್ ಮೂಲಕ ನಗರಕ್ಕೆ ನೈಜೀರಿಯಾ ಪ್ರಜೆ ಡ್ರಗ್ಸ್ ಪೂರೈಸುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೆಡ್ಲರ್‌ಗಳ ಮೇಲೆ ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ.ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ವಿ.ಬಾಲಾಜಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಕೆ.ಎಲ್.ಪ್ರಭು ಮತ್ತು ಡಿ.ಜೆ.ರಮೇಶ್ ತಂಡ ಕಾರ್ಯಾಚರಣೆ ನಡೆಸಿದೆ. ದೆಹಲಿಯಲ್ಲಿ ಅಮಿನ್ ಕೋಳಿ ಮಾಂಸ ಮಾರಾಟ ಮಳಿಗೆ ಹೊಂದಿದ್ದು, ತನ್ನ ನೆರೆಹೊರೆಯಲ್ಲಿ ನೆಲೆಸಿದ್ದ ನೈಜೀರಿಯಾ ಪ್ರಜೆಗಳ ಮೂಲಕ ಡ್ರಗ್ಸ್ ದಂಧೆಗಿಳಿದಿದ್ದ. ನಗರಕ್ಕೆ ನೈಜೀರಿಯಾ ಪ್ರಜೆ ಸೂಚನೆ ಮೇರೆಗೆ ಬಸ್ಸಿನಲ್ಲಿ ಪ್ರಯಾಣಿಕನಂತೆ ಬ್ಯಾಗ್‌ನಲ್ಲಿ ಡ್ರಗ್ಸ್ ತುಂಬಿಕೊಂಡು 10ಕ್ಕೂ ಹೆಚ್ಚಿನ ಬಾರಿ ಸಾಗಿಸಿರುವುದು ಪೊಲೀಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಟ್ಟೆ ಅಂಗಡಿ ಕೆಲಸಗಾರ ಬಳಿ 3 ಕೋಟಿ ರು. ಡ್ರಗ್ಸ್

ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬಟ್ಟೆ ಅಂಗಡಿ ಕೆಲಸಗಾರನೊಬ್ಬ ಕೆಐಎ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ರಾಕೇಶ್ ಅಗರ್ವಾಲ್ ಬಂಧಿತನಾಗಿದ್ದು, ಈತನಿಂದ 3 ಕೋಟಿ ರು ಬೆಲೆಯ 3.078 ಕೆಜಿ ಹೈಡ್ರೋ ಗಾಂಜಾ ವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಅಕ್ರಮವಾಗಿ ಹೈಡ್ರೋ ಗಾಂಜಾ ತಂದು ನಗರದಲ್ಲಿ ಆತ ಮಾರಾಟಕ್ಕೆ ಯತ್ನಿಸಿದ್ದಾಗ ಕೆಐಎ ಪಿಎಸ್‌ಐ ದತ್ತುಬಾ ತಂಡಕ್ಕೆ ಸೆರೆಯಾಗಿದ್ದಾನೆ. ಮುಂಬೈ ನಗರದಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಆತ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಆತ ಡ್ರಗ್ಸ್ ಮಾರಾಟಕ್ಕಿಳಿದಿದ್ದ.

ನಿರಂತರ ಕಾರ್ಯಾಚರಣೆ

ನಗರದಲ್ಲಿ ಪೆಡ್ಲರ್‌ಗಳನ್ನು ಮಾತ್ರವಲ್ಲ ಈ ಬಾರಿ ಡ್ರಗ್ಸ್ ಪೂರೈಕೆ ಜಾಲವನ್ನು ಪೊಲೀಸರು ಬೇಧಿಸಿದ್ದೇವೆ. ಹೊರ ರಾಜ್ಯಗಳ ಡ್ರಗ್ಸ್ ಮಾರಾಟ ಜಾಲದ ಪತ್ತೆ ಹಚ್ಚಿ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡ್ರಗ್ಸ್ ದಂಧೆಕೋರರ ಮೇಲೆ ಕಣ್ಗಾವಲು ಬಿಗಿಗೊಳಿಸಿದ್ದೇವೆ.

-ಸೀಮಂತ್ ಕುಮಾರ್ ಸಿಂಗ್ , ಪೊಲೀಸ್ ಆಯುಕ್ತ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ದರ್ಶನ್‌ಗೆ ಮತ್ತಷ್ಟು ಸಂಕಷ್ಟ
ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಯುವ ರೈತ ಆತ್ಮಹತ್ಯೆ