ಬೆಂಗಳೂರು : ಬಾಡಿಗೆದಾರ ಯುವತಿಗೆ ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ಮಾಡಿದ ಆರೋಪದಡಿ ಖಾಸಗಿ ಅಪಾರ್ಟ್‌ಮೆಂಟ್‌ವೊಂದರ ಮಾಲೀಕನ ಪುತ್ರನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್‌ಎಂವಿ 2ನೇ ಹಂತದ ಪ್ಲಾನೆಟ್ ವಿಸ್ತಾ ಅಪಾರ್ಟ್‌ಮೆಂಟ್ ನಿವಾಸಿ ಮಂಜುನಾಥಗೌಡ(30) ಬಂಧಿತ. ಡಿ.3ರ ರಾತ್ರಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 26 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ದೂರು?: ದೂರುದಾರ ಯುವತಿ ಪಶ್ಚಿಮ ಬಂಗಾಳ ಮೂಲದವರು. ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿಯು ನಗರದ ಆರ್‌ಎಂವಿ 2ನೇ ಹಂತದ ಆರೋಪಿ ಮಂಜುನಾಥ ಗೌಡನ ತಂದೆಗೆ ಸೇರಿದ ಪ್ಲಾನೆಟ್ ವಿಸ್ತಾ ಅಪಾರ್ಟ್‌ಮೆಂಟ್‌ನ 3ನೇ ಮಹಡಿಯ ಫ್ಲ್ಯಾಟ್ ಬಾಡಿಗೆ ಪಡೆದು ನೆಲೆಸಿದ್ದಾರೆ. ಡಿ.3ರಂದು ರಾತ್ರಿ ಸುಮಾರು 10.30ಕ್ಕೆ ಪಾರ್ಸೆಲ್ ತೆಗೆದುಕೊಳ್ಳಲು ಯುವತಿ ಅಪಾರ್ಟ್‌ಮೆಂಟ್‌ನ ಗೇಟ್ ಬಳಿ ನಿಂತಿದ್ದಾರೆ. ಈ ವೇಳೆ ಅಪಾರ್ಟ್‌ಮೆಂಟ್ ಮಾಲೀಕರ ಪುತ್ರ ಮಂಜುನಾಥ ಗೌಡ ವಿನಾಕಾರಣ ಯುವತಿಯನ್ನು ಮಾತನಾಡಿಸಲು ಮುಂದಾಗಿದ್ದಾನೆ. ಈ ವೇಳೆ ಆತ ಮದ್ಯ ಸೇವಿಸಿದ್ದರಿಂದ ಯುವತಿ ಆತನ ಮಾತಿಗೆ ಗಮನ ಕೊಟ್ಟಿಲ್ಲ. ಈ ವೇಳೆ ಆತ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಯುವತಿಯ ಕಪಾಳಕ್ಕೆ ಹೊಡೆದಿದ್ದಾನೆ. ಬಳಿಕ ಆಕೆಯ ಕುತ್ತಿಗೆ ಬಿಗಿಯಾಗಿ ಹಿಡಿದು ಜೋರಾಗಿ ಗೋಡೆಗೆ ಗುದ್ದಿಸಿದ್ದಾನೆ. ಈ ವೇಳೆ ಆತನ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯುವತಿ ಮುಂದಾದಾಗ ಆರೋಪಿಯು ಆಕೆಯ ಕೈ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ಯುವತಿಯನ್ನು ಬಲವಂತವಾಗಿ ಆತನ ಮನೆಗೆ ಎಳೆದುಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಬೆನ್ನಟ್ಟಿ ಅಡ್ಡಗಟ್ಟಿ ಮತ್ತೆ ಹಲ್ಲೆ: ಈ ವೇಳೆ ಯುವತಿ ತಪ್ಪಿಸಿಕೊಂಡು ತನ್ನ ಫ್ಲ್ಯಾಟ್‌ಗೆ ಕಡೆಗೆ ಓಡಿದ್ದಾರೆ. ಬೆನ್ನಟ್ಟಿದ ಆರೋಪಿಯು ಮತ್ತೆ ಆಕೆಯನ್ನು ತಡೆದು ಹಲ್ಲೆ ಮಾಡಿದ್ದಾನೆ. ಹೇಗೋ ಯುವತಿ ತಪ್ಪಿಸಿಕೊಂಡು ಫ್ಲ್ಯಾಟ್‌ಗೆ ಓಡಿ ಬಾಗಿಲು ಹಾಕಿಕೊಂಡಿದ್ದಾರೆ. ಮಾರನೇ ದಿನ ಬೆಳಗ್ಗೆ ಫ್ಲ್ಯಾಟ್ ಬಳಿ ಬಂದಿರುವ ಆರೋಪಿ ಮಂಜುನಾಥ ಗೌಡ, ಕಿಟಕಿಯಲ್ಲಿ ಇಣುಕಿ ನೋಡಿ ಒಳಗೆ ಬರಬಹುದೇ ಎಂದು ಕೇಳಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಈ ಹಿಂದೆಯೂ ಸಹ ಆರೋಪಿ ಮಂಜುನಾಥ ಗೌಡ ಯುವತಿ ಜತೆಗೆ ಗಲಾಟೆ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.