ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿಯ ಜಮೀನಿನಲ್ಲಿ ಉಳುವೆ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶಿಸಿ ಹಸುವೊಂದು ಸಾವನ್ನಪ್ಪಿದೆ.
ಮಳವಳ್ಳಿ : "ತಾಲೂಕಿನ ಬುಳ್ಳಿಕೆಂಪನದೊಡ್ಡಿ ಬಳಿಯ ಜಮೀನಿನಲ್ಲಿ ಉಳುವೆ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬದಿಂದ ವಿದ್ಯುತ್ ಸ್ಪರ್ಶಿಸಿ ಹಸುವೊಂದು ಸಾವನ್ನಪ್ಪಿದೆ.
ತಾಲೂಕಿನ ಕಿರುಗಾವಲು ಗ್ರಾಮದ ಎಂ.ಪ್ರಭು ಅವರು ಬುಳ್ಳಿಕೆಂಪನದೊಡ್ಡಿ ಹೊಂಬಮ್ಮ ಎಂಬುವವರ ಜಮೀನಿನಲ್ಲಿ ಭತ್ತದ ನಾಟಿಗಾಗಿ ಉಳುವೆ ಕೆಲಸ ಮಾಡುತ್ತಿದ್ದರು. ಈ ವೇಳೆ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಿಂದ ವಿದ್ಯುತ್ ಹರಿದಿದೆ. ಉಳುವೆ ಮಾಡುತ್ತಿದ್ದ ಹಸುವಿಗೆ ವಿದ್ಯುತ್ ಸ್ಪರ್ಶವಾಗಿದೆ. ಘಟನೆಯಲ್ಲಿ ರೈತ ಪ್ರಭು ಹಾಗೂ ಅವರ ಇನ್ನೊಂದು ಹಸು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಮುಖ್ಯಪಶು ವೈದ್ಯಾಧಿಕಾರಿ (ಆಡಳಿತ) ಡಾ.ಆರ್. ಮಂಜುನಾಥ್, ಕಿರುಗಾವಲು ಪೊಲೀಸರು ಹಾಗೂ ಸೆಸ್ಕ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ರೈತ ಪ್ರಭು ಮಾತನಾಡಿ, ತಮ್ಮ ಜೀವನಾಧಾರವಾಗಿದ್ದ ಸುಮಾರು 1.5 ಲಕ್ಷ ರು. ಮೌಲ್ಯದ ಹಸು ಸಾವನ್ನಪ್ಪಿರುವುದು ಆಘಾತ ತಂದಿದೆ. ಕುಟುಂಬದ ನಿರ್ವಹಣೆಗೆ ದಿಕ್ಕು ದೋಚದಂತಾಗಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
ಮದ್ದೂರು: ಬೈಕ್ ಡಿಕ್ಕಿಯಿಂದ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಆತಗೂರು ಹೋಬಳಿ ಮಲ್ಲನಾಯಕನಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಮಲ್ಲನಕುಪ್ಪೆ ಗ್ರಾಪಂನಲ್ಲಿ ನೀರಗಂಟಿಯಾಗಿ ಕೆಲಸ ಮಾಡುತ್ತಿದ್ದ ಎಂ.ಜಿ.ವೆಂಕಟೇಶ್ (35) ಮೃತಪಟ್ಟ ವ್ಯಕ್ತಿ. ತುಮಕೂರು, ಮದ್ದೂರು ರಾಜ್ಯ ಹೆದ್ದಾರಿಯ ಮಲ್ಲನಾಯಕನಹಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ ತುಮಕೂರು ಕಡೆಯಿಂದ ವೇಗವಾಗಿ ಬಂದ ಬೈಕ್ ವೆಂಕಟೇಶ್‌ನಿಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಗಾಯಗೊಂಡಿದ್ದಾರೆ. ಈತನನ್ನು ಮದ್ದೂರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.