ಬೆಂಗಳೂರು : ಕಿರುಕುಳ ನೀಡಿ ಉದ್ಯೋಗಿ ಆತ್ಮ*ತ್ಯೆಗೆ ಕಾರಣರಾದ ಆರೋಪದಡಿ ಓಲಾ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿ ಇತರೆ ಅಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಚಿಕ್ಕಕಲ್ಲಸಂದ್ರ ಸಮೀಪದ ಮಂಜುನಾಥ ನಗರದ ನಿವಾಸಿ ಅರವಿಂದ್ (28) ಅವರು ಮನೆಯಲ್ಲಿ ವಿಷ ಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದರು. ಈ ಘಟನೆ ಸಂಬಂಧ ಮೃತನ ಸೋದರ ನೀಡಿದ ದೂರಿನ ಮೇರೆಗೆ ಓಲಾ ಕಂಪನಿ ಭವೀಶ್ ಹಾಗೂ ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ದಾಸ್ ಸೇರಿ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಡೆತ್ ನೋಟ್ ಬರೆದಿಟ್ಟಿದ್ದ ಅರವಿಂದ್
ಕೋರಮಂಗಲದಲ್ಲಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯ ಹೋಮೋಲೋಗೆಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಮೃತ ಅರವಿಂದ್ ಕೆಲಸ ಮಾಡುತ್ತಿದ್ದರು. ಸೆ.28 ರಂದು ಬೆಳಗ್ಗೆ 11 ಗಂಟೆಗೆ ವಿಷ ಸೇವಿಸಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು.
ಈ ನಡುವೆ ಅರವಿಂದ್ ಅವರ ಖಾತೆಗೆ ಕಂಪನಿಯಿಂದ 17.46 ಲಕ್ಷ ರು. ಜಮೆಯಾಗಿತ್ತು. ಈ ವಿಷಯ ತಿಳಿದ ಕುಟುಂಬದವರು, ಈ ಹಣದ ವಿಚಾರವಾಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸೂಕ್ತ ಮಾಹಿತಿ ನೀಡಲಿಲ್ಲ. ಆಗ ಕಂಪನಿಯ ಅಧಿಕಾರಿಗಳ ನಡವಳಿಕೆ ಮೇಲೆ ಮೃತರ ಕುಟುಂಬದವರಿಗೆ ಗುಮಾನಿ ಬಂದಿದೆ. ಅಲ್ಲದೆ ಅರವಿಂದ್ ಮನೆಯಲ್ಲಿ ಆತ ಬರೆದಿಟ್ಟಿದ್ದ ಎನ್ನಲಾಗಿದ್ದ 28 ಪುಟಗಳ ಮರಣ ಪತ್ರ ಪತ್ತೆಯಾಗಿತ್ತು. ಈ ಪತ್ರದಲ್ಲಿ ತನಗೆ ಕೆಲಸದ ವಿಚಾರವಾಗಿ ಕಂಪನಿಯ ಸಿಇಒ ಹಾಗೂ ಹಿರಿಯ ಅಧಿಕಾರಿ ದಾಸ್ ಒತ್ತಡ ಹಾಕುತ್ತಿದ್ದಾರೆ. ಸಣ್ಣಪುಟ್ಟ ಕಾರಣ ಮುಂದಿಟ್ಟು ತನಗೆ ಭತ್ಯೆ ಹಾಗೂ ವೇತನ ಪರಿಷ್ಕರಣೆ ಮಾಡದೆ ಹಿಂಸೆ ಕೊಡುತ್ತಿದ್ದಾರೆ. ಈ ಕಿರುಕುಳ ಸಹಿಸಲಾರದೆ ಆತ್ಮ*ತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದರು. ಈ ಪತ್ರವನ್ನು ನೋಡಿದ ಮೃತನ ಸೋದರ, ಕೊನೆಗೆ ಕಂಪನಿಯ ಅಧಿಕಾರಿಗಳೇ ತಮ್ಮ ಸೋದರ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದ್ದರು.