ಕೊಲೆ ವೇಳೆ ದರ್ಶನ್‌ ಶೆಡ್‌ನಲ್ಲಿದ್ದಿದ್ದಕ್ಕೆ ಸಿಕ್ಕ ಸಾಕ್ಷ್ಯ! - ರೇಣುಕಾ ಕೇಸಲ್ಲಿ 2ನೇ ಚಾರ್ಜ್‌ಶೀಟ್‌

Published : Nov 24, 2024, 11:27 AM IST
Actor Darshan

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಸುಮಾರು 1200ಕ್ಕೂ ಅಧಿಕ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಸುಮಾರು 1200ಕ್ಕೂ ಅಧಿಕ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಪ್ರಕರಣದ ತನಿಖಾಧಿಕಾರಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್‌ ಕುಮಾರ್‌ ಅವರು ಶನಿವಾರ ನಗರದ 57ನೇ ಸಿಸಿಎಚ್‌ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದ ದಿನ ಚಿತ್ರದುರ್ಗದ ಗ್ಯಾಂಗ್‌ ಪಟ್ಟಣಗೆರೆ ಶೆಡ್‌ ಬಳಿ ಪ್ರಮುಖ ಆರೋಪಿ ನಟ ದರ್ಶನ್‌ ಜತೆಗೆ ಮೊಬೈಲ್‌ನಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನೂ ಈ ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಲಾಗಿದೆ. ಅಂದರೆ, ಘಟನೆ ವೇಳೆ ನಟ ದರ್ಶನ್‌ ಶೆಡ್‌ನಲ್ಲೇ ಇದ್ದರು ಎಂಬುದಕ್ಕೆ ಈ ಫೋಟೋಗಳು ಪ್ರಬಲ ಸಾಕ್ಷ್ಯಗಳಾಗಲಿವೆ. ಸದ್ಯ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿರುವ ನಟ ದರ್ಶನ್‌ ಹಾಗೂ ಇತರೆ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ನಟ ದರ್ಶನ್‌ ಸೇರಿ 17 ಆರೋಪಿಗಳ ವಿರುದ್ಧ ತನಿಖಾಧಿಕಾರಿ ಸೆ.4ರಂದು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಬರೋಬ್ಬರಿ 3,991 ಪುಟಗಳ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಸುಮಾರು 1200ಕ್ಕೂ ಅಧಿಕ ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಆಗಬಹುದಾದ 8 ಫೋಟೋಗಳು, ಸುಮಾರು 40ಕ್ಕೂ ಅಧಿಕ ಸಾಕ್ಷಿಗಳು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು, ಆರೋಪಿಗಳ ಮೊಬೈಲ್‌ ಕರೆಗಳ ವಿವರದ ಸಿಡಿಆರ್‌ ಸೇರಿದಂತೆ ಮಹತ್ವದ ತಾಂತ್ರಿಕ ಸಾಕ್ಷ್ಯಗಳನ್ನು ಒಳಗೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಚಿತ್ರದುರ್ಗದ ಗ್ಯಾಂಗ್‌ ದರ್ಶನ್‌ ಜತೆಗೆ ಫೋಟೋ:

ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ವೇಳೆ ನಟ ದರ್ಶನ್‌ ಸ್ಥಳದಲ್ಲೇ ಇರಲಿಲ್ಲ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಬಲವಾಗಿ ವಾದಿಸಿದ್ದರು. ಇದೀಗ ಪೊಲೀಸರು ರೇಣುಕಾಸ್ವಾಮಿ ಕೊಲೆ ವೇಳೆ ನಟ ದರ್ಶನ್‌ ಶೆಡ್‌ ಬಳಿಯೇ ಇದ್ದರು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಳಿಕ ಚಿತ್ರದುರ್ಗ ಗ್ಯಾಂಗ್‌ ಶೆಡ್‌ನಿಂದ ನಿರ್ಗಮಿಸುವ ಮುನ್ನ ಶೆಡ್‌ನಲ್ಲೇ ಇದ್ದ ನಟ ದರ್ಶನ್‌ ಜತೆಗೆ ಮೊಬೈಲ್‌ನಲ್ಲಿ ಫೋಟೋ ತೆಗೆಸಿಕೊಂಡಿತ್ತು. ಪ್ರತ್ಯಕ್ಷದರ್ಶಿ ಪುನೀತ್‌ ಎಂಬಾತನೇ ತನ್ನ ಮೊಬೈಲ್‌ನಲ್ಲಿ ಈ ಫೋಟೋಗಳನ್ನು ತೆಗೆದಿದ್ದ.

ಎಂಟು ಫೋಟೋಗಳು ರಿಟ್ರೀವ್:

ಕೊಲೆ ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ವಿನಯ್‌, ಪುನೀತ್‌ನಿಂದ ಮೊಬೈಲ್‌ ಪಡೆದು ಆ ಫೋಟೋಗಳನ್ನು ಡಿಲೀಟ್‌ ಮಾಡಿದ್ದ. ತನಿಖೆ ವೇಳೆ ಪುನೀತ್‌ನ ಮೊಬೈಲ್‌ ಜಪ್ತಿ ಮಾಡಿದ್ದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಡಿಲಿಟ್‌ ಆಗಿದ್ದ ಆ 8 ಫೋಟೋಗಳನ್ನು ರಿಟ್ರೀವ್‌ ಮಾಡಿಸಿದ್ದಾರೆ. ಇದೀಗ ಆ ಫೋಟೋಗಳನ್ನು ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಿದ್ದಾರೆ. ಹೀಗಾಗಿ ರೇಣುಕಾಸ್ವಾಮಿ ಕೊಲೆ ವೇಳೆ ನಟ ದರ್ಶನ್‌ ಪಟ್ಟಣಗೆರೆಯ ಶೆಡ್‌ನಲ್ಲೇ ಇದ್ದರು ಎಂಬುದಕ್ಕೆ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ. ಈ ಫೋಟೋ ಸಾಕ್ಷಿ ಮುಂದಿನ ದಿನಗಳಲ್ಲಿ ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎನ್ನಲಾಗಿದೆ.

PREV

Recommended Stories

ಖಿನ್ನತೆಗೆ ಒಳಗಾಗಿ ಕಾವೇರಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಮದುವೆ ಆಗುವುದಾಗಿ ಅತ್ಯಾ*ರ : ಮಾಜಿ ಶಾಸಕರ ವಿರುದ್ಧ ಎಫ್‌ಐಆರ್‌