ಉದ್ಯಮಿ ಗೆಳೆಯನ ಅಪಹರಿಸಿ ಚಿನ್ನ ಸುಲಿಗೆ ಮಾಡಿದ್ದ ಗೆಳತಿ ಹಾಗೂ ಆಕೆಗೆ ಸಾಥ್‌ ನೀಡಿದ್ದವರ ಬಂಧನ

KannadaprabhaNewsNetwork | Updated : Nov 24 2024, 04:21 AM IST

ಸಾರಾಂಶ

ಗೆಳೆಯ ಉದ್ಯಮಿಯನ್ನು ಅಪಹರಿಸಿ ಚಿನ್ನ ಸುಲಿಗೆ ಮಾಡಿದ್ದ ಗೆಳತಿ ಹಾಗೂ ಆಕೆಗೆ ಸಾಥ್‌ ನೀಡಿದ್ದವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

 ಬೆಂಗಳೂರು : ಆಂಧ್ರಪ್ರದೇಶ ಮೂಲದ ಉದ್ಯಮಿಯನ್ನು ಅಪಹರಿಸಿ ಹಲ್ಲೆಗೈದು ₹4.20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಗೆಳತಿ ಸೇರಿ ಏಳು ಮಂದಿ ಆರೋಪಿಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಪೆನುಗೊಂಡ ನಿವಾಸಿಗಳಾದ ಮೋನಿಕಾ, ಹರೀಶ್, ಹರಿಕೃಷ್ಣ, ನರಸಿಂಹ, ರಾಜು, ಆಂಜಿನಪ್ಪ ಮತ್ತು ನರೇಂದ್ರ ಬಂಧಿತರು. ಆರೋಪಿಗಳು ನ.17ರಂದು ಆಂಧ್ರಪ್ರದೇಶದ ನೆಲ್ಲೂರು ಮೂಲದ ಉದ್ಯಮಿ ಪೋತುಲ ಶಿವ(31) ಅವರನ್ನು ಪೆನುಗೊಂಡದಲ್ಲಿ ಅಪಹರಿಸಿ, ಪಾವಗಡಕ್ಕೆ ಕರೆತಂದು ಮನೆಯೊಂದರಲ್ಲಿ ಕೂಡಿ ಹಾಕಿ ಹಲ್ಲೆಗೈದು ಚಿನ್ನಾಭರಣ ಸುಲಿಗೆ ಮಾಡಿದ್ದರು. ಈ ಸಂಬಂಧ ಪೋತುಲ ಶಿವ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆತನ ಗೆಳತಿ ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ನೆಲ್ಲೂರು ಮೂಲದ ಉದ್ಯಮಿ ಪೋತುಲ ಶಿವ ಮತ್ತು ಪೆನುಗೊಂಡ ಮೂಲದ ಮೋನಿಕಾ ಸ್ನೇಹಿತರಾಗಿದ್ದರು. ನ.17ರಂದು ಮೋನಿಕಾ, ಪೋತುಲ ಶಿವನಿಗೆ ಕರೆ ಮಾಡಿ ಪೆನುಗೊಂಡಕ್ಕೆ ಕರೆಸಿಕೊಂಡಿದ್ದಳು. ಬಳಿಕ ಸುತ್ತಾಡಲು ಪಾವಗಡಕ್ಕೆ ಕರೆತಂದಿದ್ದಳು. ಬಳಿಕ ಇಬ್ಬರು ಪಾವಗಡದ ಹೈ ವೇ ಬಳಿ ನಡೆದುಕೊಂಡು ಹೋಗುವಾಗ, ಕಾರೊಂದರಲ್ಲಿ ಬಂದ ಆರೋಪಿಗಳಾದ ಹರೀಶ್, ಹರಿಕೃಷ್ಣ ಹಾಗೂ ಇತರರು ತಾವು ಪೊಲೀಸರೆಂದು ಪರಿಚಯಿಸಿಕೊಂಡು ಬಳಿಕ ಪೋತುಲ ಶಿವ ಮತ್ತು ಮೋನಿಕಾಳನ್ನು ಕಾರಿನಲ್ಲಿ ಅಪಹರಿಸಿ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ.

ಚಿನ್ನಾಭರಣ ಸುಲಿಗೆ:

ಬಳಿಕ ಆರೋಪಿಗಳು ಪೋತುಲ ಶಿವನ ಮೇಲೆ ಹಲ್ಲೆ ಮಾಡಿ ಆತನ ಬಳಿ ಇದ್ದ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಬಳಿಕ ಮೋನಿಕಾಳನ್ನು ಅಲ್ಲಿಂದ ಬಿಟ್ಟು ಕಳುಹಿಸಿದ್ದಾರೆ. ನಂತರ ಪೋತುಲ ಶಿವನಿಗೆ ₹10 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಬಳಿಕ ₹5 ಲಕ್ಷ ನೀಡಲು ಪೋತುಲ ಶಿವ ಒಪ್ಪಿಕೊಂಡಿದ್ದಾರೆ.

ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಜಗಳ:

ಬಳಿಕ ಪೋತುಲ ಶಿವ ಬೆಂಗಳೂರಿನಲ್ಲಿರುವ ಕೆಲವು ಸ್ನೇಹಿತರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ತುರ್ತಾಗಿ ಹಣ ಕೊಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಆರೋಪಿಗಳು ನ.20ರಂದು ಪೋತುಲ ಶಿವನನ್ನು ಮೆಜೆಸ್ಟಿಕ್‌ಗೆ ಕರೆತಂದಿದ್ದಾರೆ. ಅಪಹರಣದ ವಿಚಾರ ತಿಳಿಯದ ಇಬ್ಬರು ಸ್ನೇಹಿತರು ಮೆಜೆಸ್ಟಿಕ್‌ಗೆ ಬಂದು ಎಟಿಎಂ ಕಾರ್ಡ್‌ಗಳನ್ನು ನೀಡಿದ್ದಾರೆ. ಬಳಿಕ ಆರೋಪಿಗಳು ಪೋತುಲ ಶಿವನನ್ನು ನಗರದ ವಿವಿಧೆಡೆ ಕಾರಿನಲ್ಲಿ ಸುತ್ತಾಡಿಸಿ ನ.21ರ ಮಧ್ಯಾಹ್ನ ಕೋರಮಂಗಲದ ಫೋರಂ ಮಾಲ್‌ ಬಳಿಯ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಲು ಬಂದಿದ್ದಾರೆ. ಈ ವೇಳೆ ಪೋತುಲ ಶಿವ ಹಾಗೂ ಇಬ್ಬರು ಆರೋಪಿಗಳು ಎಟಿಎಂ ಕೇಂದ್ರದೊಳಗೆ ಜಗಳ ಶುರು ಮಾಡಿದ್ದಾರೆ.

ಬೆನ್ನಟ್ಟಿ ಇಬ್ಬರ ಬಂಧನ

ಇದೇ ಸಮಯಕ್ಕೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಪಿಎಸ್‌ಐ ಮಾದೇಶ್‌ ಈ ಜಗಳ ಗಮನಿಸಿದ್ದಾರೆ. ಬಳಿಕ ಸಿಬ್ಬಂದಿ ಜತೆಗೆ ಎಟಿಎಂ ಕೇಂದ್ರದ ಬಳಿಗೆ ಬಂದಿದ್ದಾರೆ. ಪೊಲೀಸರನ್ನು ನೋಡಿದ ಇಬ್ಬರು ಆರೋಪಿಗಳು ಭಯಗೊಂಡು ಓಡಲು ಮುಂದಾಗಿದ್ದಾರೆ. ಅಷ್ಟರಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಪೋತುಲ ಶಿವ ಪೊಲೀಸರ ಬಳಿ ತನ್ನ ಅಪಹರಣ ಹಾಗೂ ಸುಲಿಗೆ ವಿಚಾರದ ಬಗ್ಗೆ ಹೇಳಿದ್ದಾರೆ. ಬಳಿಕ ಈ ಸಂಬಂಧ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

ಗೆಳತಿಯೇ ಮಾಸ್ಟರ್‌ ಮೈಂಡ್‌

ಉದ್ಯಮಿ ಪೋತುಲ ಶಿವನ ಗೆಳತಿ ಮೋನಿಕಾ ಈ ಅಪಹರಣ ಹಾಗೂ ಸುಲಿಗೆ ಪ್ರಕರಣದ ಪ್ರಮುಖ ಮಾಸ್ಟರ್‌ ಮೈಂಡ್‌ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ತನ್ನ ಗ್ಯಾಂಗ್‌ ಜತೆಗೆ ಸೇರಿಕೊಂಡು ಪೋತುಲ ಶಿವನ ಸುಲಿಗೆ ಮಾಡಲು ಯೋಜನೆ ರೂಪಿಸಿದ್ದಳು. ಅದರಂತೆ ಪೆನುಗೊಂಡಕ್ಕೆ ಶಿವನನ್ನು ಕರೆಸಿಕೊಂಡು ಬಳಿಕ ಸುತ್ತಾಟದ ನೆಪದಲ್ಲಿ ಪಾವಗಡಕ್ಕೆ ಕರೆತಂದು ಬಳಿಕ ಪೂರ್ವ ಯೋಜನೆಯಂತೆ ಆರೋಪಿಗಳು ಪೋತುಲ ಶಿವನನ್ನು ಸುಲಿಗೆ ಮಾಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Share this article