ಮೈಸೂರು : ಮೈಸೂರಿನ ನ್ಯಾಯಾಲಯಗಳಿಗೆ ಮಂಗಳವಾರ ಬಂದ ಹುಸಿ ಬಾಂಬ್ ಇಮೇಲ್ ಸಂದೇಶದಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಚಾಮರಾಜಪುರಂ ಮತ್ತು ಜಯನಗರದಲ್ಲಿರುವ ನ್ಯಾಯಾಲಯ ಆವರಣವನ್ನು ಪೊಲೀಸರು ಸಂಪೂರ್ಣ ಪರಿಶೀಲನೆ ಬಳಿಕ ಹುಸಿ ಸಂದೇಶ ಎಂಬುದು ಸಾಬೀತಾಯಿತು. ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು.
ನ್ಯಾಯಾಲಯಗಳಲ್ಲಿ 3 ಕಡೆ ಆರ್ ಡಿಎಕ್ಸ್ ಬಾಂಬ್ ಇರಿಸಿದ್ದು, ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟಿಸಲಾಗುವುದು ಅಥವಾ ಮಾನವ ಆತ್ಮಹತ್ಯೆ ಸ್ಫೋಟ ಮಾಡಲಾಗುವುದು. ಮಧ್ಯಾಹ್ನ 1.55ರ ಒಳಗೆ ನ್ಯಾಯಾಧೀಶರನ್ನು ಸ್ಥಳಾಂತರಿಸಿ ಎಂಬ ಬೆದರಿಕೆ ಇಮೇಲ್ ಸಂದೇಶವು ನ್ಯಾಯಾಧೀಶರಿಗೆ ಬಂದಿದೆ. ಇದರಿಂದ ನ್ಯಾಯಾಲಯಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಿಮ್ಮ ನ್ಯಾಯಾಲಯದ ಆವರಣದಲ್ಲಿ 3 ಆರ್ ಡಿಎಕ್ಸ್ ಐಇಡಿಗಳನ್ನು ಬಳಸಿ ಬಾಂಬ್ ಇರಿಸಿದ್ದು, ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಲಾಗುವುದು ಅಥವಾ ಮಾನವ ಆತ್ಮಹತ್ಯೆ ಸ್ಫೋಟ ಮಾಡಲಾಗುವುದು ಎಂದು ಮಹಮ್ಮದ್ ವಿಕ್ರಮ್ ರಾಜಗುರು ಎಂಬಾತ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಇ–ಮೇಲ್ ಮೂಲಕ ಬೆದರಿಕೆ ಹಾಕಿರುವುದು ಮಂಗಳವಾರ ಬೆಳಗ್ಗೆ 9.45ಕ್ಕೆ ನ್ಯಾಯಾಧೀಶರು ಇ-ಮೇಲ್ ಗಮನಿಸಿದಾಗ ಗೊತ್ತಾಗಿದೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ನ್ಯಾಯಾಲಯ ಹಾಗೂ ಆವರಣದಲ್ಲಿದ್ದ ಸಿಬ್ಬಂದಿ, ವಕೀಲರು ಮತ್ತು ಕಕ್ಷಿದಾರರನ್ನು ಹೊರಗೆ ಕಳುಹಿಸಿ, ಗೇಟ್ ಬಾಗಿಲು ಮುಚ್ಚಿದ ಬಳಿಕ ನ್ಯಾಯಾಲಯ ಆವರಣವನ್ನು ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನ ದಳದ ಸಿಬ್ಬಂದಿ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.
ಆದರೆ, ಎಲ್ಲೂ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಪರಿಶೀಲನೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ನಿರ್ಧರಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಮಧ್ಯಾಹ್ನ 2 ಗಂಟೆಯವರೆಗೆ ವಕೀಲರು ಮತ್ತು ಸಿಬ್ಬಂದಿಯನ್ನು ನ್ಯಾಯಾಲಯ ಆವರಣಕ್ಕೆ ಬಿಟ್ಟಿರಲಿಲ್ಲ. ಮಧ್ಯಾಹ್ನ 2ರ ಬಳಿಕ ಪ್ರತಿಯೊಬ್ಬರ ಬ್ಯಾಗ್ ಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿದ ನಂತರ ನ್ಯಾಯಾಲಯದ ಒಳಕ್ಕೆ ಬಿಟ್ಟರು. ಅಲ್ಲದೆ, ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೊಂಡೊಯ್ಯಲು ಪೊಲೀಸರು ಅವಕಾಶ ನೀಡಿದರು.
ಈ ಹುಸಿ ಬಾಂಬ್ ಇಮೇಲ್ ಸಂದೇಶದಿಂದ ನ್ಯಾಯಾಲಯಗಳ ಕಾರ್ಯಕಲಾಪಗಳು ಮಧ್ಯಾಹ್ನದವರೆಗೆ ಸ್ಥಗಿತಗೊಂಡಿತ್ತು. ವಕೀಲರು, ಸಿಬ್ಬಂದಿ ಹೊರ ಬಂದಿದ್ದರಿಂದ ಕೃಷ್ಣರಾಜ ಬುಲೇವಾಡ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ಸಂಚಾರ ಪೊಲೀಸರು ವಾಹನಗಳ ದಟ್ಟಣೆ ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಾಲಯದ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.