ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಷ್ಠಿತ ಖಾಸಗಿ ಜೀವಾ ವಿಮಾ ಕಂಪನಿಗಳ ಹೆಸರಿನಲ್ಲಿ ವಿಮೆ ಮಾಡಿಸಿಕೊಡುವುದಾಗಿ ನಂಬಿಸಿ ಜನರಿಗೆ ವಂಚಿಸಿ ಕೋಟ್ಯಂತರ ರುಪಾಯಿ ಲಪಟಾಯಿಸಿದ್ದ ಚಾಲಾಕಿ ಮೋಸಗಾರನೊಬ್ಬ ಸೈಬರ್ ಕ್ರೈಂ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉತ್ತರಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ಮನವೀರ್ ಸಿಂಗ್ ಅಲಿಯಾಸ್ ಮನೋಜ್ ಬಂಧಿತನಾಗಿದ್ದು, ಆತನಿಂದ ₹4.51 ಕೋಟಿ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಆದಿತ್ಯ ಸನ್ ಲೈಫ್ ವಿಮಾ ಕಂಪನಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಪ್ರೀಮಿಯಂ ಬಾಂಡ್ ನೀಡುವುದಾಗಿ ನಂಬಿಸಿ ₹15 ಲಕ್ಷ ವಂಚಿಸಿದ್ದ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.
ಓದಿದ್ದು ಬಿಎಸ್ಸಿ, ಆಗಿದ್ದು ಸೈಬರ್ ವಂಚಕ:
ಉತ್ತರಪ್ರದೇಶದ ಘಾಜಿಯಾಬಾದ್ ಮೂಲದ ಮನವೀರ್ ಸಿಂಗ್ ಬಿಎಸ್ಸಿ ಪದವೀಧರನಾಗಿದ್ದು, ನಾಲ್ಕು ವರ್ಷಗಳ ಹಿಂದೆ ಉದ್ಯೋಗ ಅರಸಿಕೊಂಡು ನೋಯ್ಡಾಗೆ ತೆರಳಿದ್ದ.
ಆ ನಗರದಲ್ಲಿ ಕೆಲ ತಿಂಗಳು ರಿಯಲ್ ಎಸ್ಟೇಟ್ ಏಜೆಂಟ್ ಆಗಿ ದುಡಿಯುತ್ತಿದ್ದ ಆತ, ಯೂಟ್ಯೂಬ್‌ನಲ್ಲಿ ಜೀವಾ ವಿಮಾ ಹೆಸರಿನ ವಂಚನೆ ಕೃತ್ಯಗಳನ್ನು ನೋಡಿ ಪ್ರಭಾವಿತನಾಗಿದ್ದ.
ಕೊನೆಗೆ ಸುಲಭವಾಗಿ ಸಂಪಾದಿಸಲು ವಂಚನೆ ಹಾದಿ ತುಳಿದ ಮನವೀರ್, ಮೊದಲು ಖಾಸಗಿ ವಿಮಾ ಕಂಪನಿಯ ಏಜೆಂಟ್ ಸೋಗಿನಲ್ಲಿ ಸಾರ್ವಜನಿಕರಿಬ್ಬರಿಗೆ ಕರೆ ಮಾಡಿ ₹50 ಸಾವಿರ ಟೋಪಿ ಹಾಕಿದ.
ಹೀಗೆ ಬೆವರು ಹರಿಸದೆ ಲಕ್ಷ ಲಕ್ಷ ಗಳಿಸಬಹುದು ಎಂದು ಭಾವಿಸಿ ಜನರಿಗೆ ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಗೆ ವಂಚನೆ?
ಎಚ್‌ಡಿಎಫ್‌ಸಿ, ಆದಿತ್ಯ ಬಿರ್ಲಾ ಸನ್ ಲೈಫ್, ರಿಲೆಯನ್ಸ್ ಹೀಗೆ ಪ್ರತಿಷ್ಠಿತ ಖಾಸಗಿ ವಿಮಾ ಕಂಪನಿಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟನ್ನು ಸೃಷ್ಟಿಸುತ್ತಿದ್ದ.
ಈ ವೆಬ್‌ಸೈಟನ್ನು ಗಮನಿಸಿ ವಿಮೆ ಮಾಡಿಸಲು ಸಂಪರ್ಕಿಸುವ ಗ್ರಾಹಕರಿಗೆ ನೂಜೂಕಿನ ಮಾತುಗಳ ಮೂಲಕ ಮರುಳು ಮಾಡಿ ತನ್ನ ಮೋಸ ಜಾಲಕ್ಕೆ ಮನವೀರ್ ಬೀಳಿಸಿಕೊಳ್ಳುತ್ತಿದ್ದ.
ವಿಮಾ ಪಾಲಿಸಿದಾರರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪೋಟೋ ಹಾಗೂ ಚೆಕ್‌ಗಳನ್ನು ಆತ ಸಂಗ್ರಹಿಸುತ್ತಿದ್ದ. ಈ ದಾಖಲೆ ಸಂಗ್ರಹಕ್ಕೆ ಸ್ಥಳೀಯ ವ್ಯಕ್ತಿಯೊಬ್ಬನನ್ನು ಮನವೀರ್ ನೇಮಿಸಿಕೊಂಡಿದ್ದ.
ಹೀಗೆ ಸಂಗ್ರಹಿಸಿದ ದಾಖಲೆಗಳನ್ನು ಕೊರಿಯರ್ ಮೂಲಕ ಪಡೆದುಕೊಳ್ಳುತ್ತಿದ್ದ ಆತ, ಆ ಚೆಕ್‌ಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡುತ್ತಿದ್ದ.
ಗ್ರಾಹಕರು ಪಾಲಿಸಿ ಹಣ ಪಾವತಿಸಿದ ಕೂಡಲೇ ಎಟಿಎಂಗಳಲ್ಲಿ ಆ ಹಣವನ್ನು ಆತ ಡ್ರಾ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದೇ ರೀತಿ ಆದಿತ್ಯ ಬಿರ್ಲಾ ಸನ್ ಲೈಫ್ ವಿಮಾ ಕಂಪನಿಯ ಪ್ರತಿನಿಧಿ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಪ್ರೀಮಿಯಂ ಬಾಂಡ್ ನೀಡುವುದಾಗಿ ನಂಬಿಸಿ ₹15 ಲಕ್ಷ ಪಾಲಿಸಿ ಹಣವನ್ನು ಚೆಕ್ ಮೂಲಕ ತುಂಬುವಂತೆ ಹೇಳಿದ್ದ.
ಈ ಮಾತು ನಂಬಿದ ದೂರುದಾರರು, ತಮ್ಮ ದಾಖಲಾತಿಗಳು ಹಾಗೂ ಹಣವನ್ನು ಚೆಕ್ ಮೂಲ ನೀಡಿದ್ದರು. ಆದರೆ ತಿಂಗಳ ಪಾಲಿಸಿಯ ಲಾಭದ ಹಣ ಬಾರದೆ ಹೋದಾಗ ಆತಂಕಗೊಂಡ ಅವರು, ತಮಗೆ ಕರೆ ಮಾಡಿದ್ದ ವ್ಯಕ್ತಿ ಮೊಬೈಲ್ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು.
ನಂತರ ಆದಿತ್ಯ ಬಿರ್ಲಾ ವಿಮಾ ಕಂಪನಿಯನ್ನು ಸಂಪರ್ಕಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಂಚನೆ ದುಡ್ಡದಲ್ಲಿ ಗೊಬ್ಬರದ ಅಂಗಡಿ: ಸೈಬರ್ ವಂಚನೆ ದುಡ್ಡಿನಲ್ಲಿ ತನ್ನೂರಿನ ಕೃಷಿ ಸೇವಾ ಕೇಂದ್ರವನ್ನು ತೆರೆದಿದ್ದ ಮನವೀರ್, ಅಲ್ಲಿ ರಸಗೊಬ್ಬರ ಹಾಗೂ ಕೃಷಿ ಉಪಕರಣಗಳ ಮಾರಾಟ ಮಾಡುತ್ತಿದ್ದ.
ಆತನ ಕುಟುಂಬದವರು ಸೇರಿ ಯಾರೊಬ್ಬರಿಗೂ ಮನವೀರ್‌ನ ಮೋಸದ ಕೃತ್ಯ ಅರಿವಿರಲಿಲ್ಲ. ಭಾರಿ ಸಭ್ಯಸ್ಥನಂತೆ ಸ್ಥಳೀಯವಾಗಿ ಜನರ ವಿಶ್ವಾಸವನ್ನು ಆತ ಗಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.34 ಕೇಸ್, ₹4 ಕೋಟಿ ಜಪ್ತಿ!
ನಾಲ್ಕು ವರ್ಷಗಳಿಂದ ಸೈಬರ್ ವಂಚನೆ ಕೃತ್ಯದಲ್ಲಿ ಮನವೀರ್ ತೊಡಗಿದ್ದು, ಇದುವರೆಗೆ ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 34 ಪ್ರಕರಣಗಳು ದಾಖಲಾಗಿವೆ.
ಆರೋಪಿಯಿಂದ ₹4.51 ಕೋಟಿ ಜಪ್ತಿ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಆತನ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2 ವರ್ಷದ ಬಳಿಕ ಸಿಕ್ಕಿಬಿದ್ದ: ಎರಡು ವರ್ಷಗಳ ಹಿಂದೆ ಇದೇ ರೀತಿ ಸೈಬರ್ ವಂಚನೆ ಕೃತ್ಯದಲ್ಲಿ ಬಂಧಿಸಲು ತೆರಳಿದ್ದ ಸೈಬರ್ ಕ್ರೈಂ ಪೊಲೀಸರಿಂದ ಮನವೀರ್ ತಪ್ಪಿಸಿಕೊಂಡಿದ್ದ. ಸತತ ಪ್ರಯತ್ನದ ಬಳಿಕ ಮೋಸಗಾರನನ್ನು ಸಿಸಿಬಿ ಬಂಧಿಸುವಲ್ಲಿ ಯಶಸ್ಸು ಕಂಡಿದೆ.