;Resize=(412,232))
ಬೆಂಗಳೂರು : ಮನೆಯಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ಕಾರು ಮೆಕ್ಯಾನಿಕ್‌ನೊಬ್ಬ ಅಮಾನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲತ್ತಹಳ್ಳಿ ನಿವಾಸಿ ತೌಹಿಬ್ ಪಾಷ (26) ಮೃತ ದುರ್ದೈವಿ. ಪಾಷ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದರೆ, ಪಾಷನನ್ನು ಆತನ ಪತ್ನಿ ಚಾಕು ಇರಿದು ಕೊಂದಿದ್ದಾಳೆ ಎಂದು ಮೃತನ ಪೋಷಕರು ದೂರಿದ್ದಾರೆ.
ಕೌಟುಂಬಿಕ ವಿಚಾರಕ್ಕೆ ಮನೆಯಲ್ಲಿ ಮಂಗಳವಾರ ಸಂಜೆ ಪಾಷ ದಂಪತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಿಟ್ಟಿಗೆದ್ದು ಪಾಷ ಚಾಕುವಿನಿಂದ ಹೊಟ್ಟೆಗೆ ಇರಿದುಕೊಂಡಿದ್ದಾನೆ. ಕೂಡಲೇ ಆತನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಪಾಷ ಮೃತಪಟ್ಟಿದ್ದಾನೆ.
ಮೂರು ವರ್ಷಗಳ ಹಿಂದೆ ಪಾಷ ಹಾಗೂ ಸುಹಾನಾ ಪ್ರೇಮ ವಿವಾಹವಾಗಿದ್ದು, ಈ ದಂಪತಿಗೆ ಒಂದು ವರ್ಷದ ಮಗುವಿದೆ. ಮದುವೆ ಬಳಿಕ ಮಲ್ಲತ್ತಹಳ್ಳಿಯಲ್ಲಿ ಪಾಷ ಕುಟುಂಬ ನೆಲೆಸಿತ್ತು. ಇತ್ತೀಚಿಗೆ ಕೌಟುಂಬಿಕ ವಿಷಯವಾಗಿ ಅವರ ಸಂಸಾರದಲ್ಲಿ ವಿರಸ ಶುರುವಾಗಿತ್ತು. ಈ ಮನಸ್ತಾಪ ಹಿನ್ನಲೆಯಲ್ಲಿ ಮನೆಯಲ್ಲಿ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು. ಅಂತೆಯೇ ಮಂಗಳವಾರ ಸಂಜೆ ಸಹ ದಂಪತಿ ಮಧ್ಯೆ ಉಂಟಾದ ಜಗಳವು ದುರಂತ ಅಂತ್ಯ ಕಂಡಿದೆ ಎಂದು ಮೂಲಗಳು ಹೇಳಿವೆ.
ತಮ್ಮ ಮಗ ಪಾಷನನ್ನು ಸೊಸೆ ಹಾಗೂ ಆಕೆಯ ಹೆತ್ತವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ಪೋಷಕರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕೊಲೆಗೆ ಬಗ್ಗೆ ಶಂಕೆ ಇದೆ. ಹೀಗಾಗಿ ನೋಟಿಸ್ ನೀಡಿ ಮೃತನ ಪತ್ನಿ ಹಾಗೂ ಆಕೆಯ ಪೋಷಕರನ್ನು ವಿಚಾರಣೆ ನಡೆಸಿದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.