ಕನ್ನಡಪ್ರಭ ವಾರ್ತೆ ಬೆಂಗಳೂರು

ತರಗತಿಯಲ್ಲಿ ಸಹಪಾಠಿ ಜತೆ ಜಗಳವಾಡಿದ್ದಕ್ಕೆ ಶಿಕ್ಷಕರು ದಂಡಿಸಿ ಅವಮಾನಿಸಿದರು ಎಂದು ಬೇಸರಗೊಂಡು ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಲಸಂದ್ರ ನಿವಾಸಿ ಕಿರಾಣಿ ಅಂಗಡಿ ಮಾಲಿಕ ಮಹೇಶ್ ಕುಮಾರ್ ದಂಪತಿ ಪುತ್ರ ಮಂಗಳವಾರ ಸಂಜೆ ಆತ್ಮಹತ್ಯೆ ಯತ್ನಿಸಿದ್ದು, ಕೂಡಲೇ ಆತನನ್ನು ಕೂಡಲೇ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದಾರೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯಾರ್ಥಿ ಜೀವನ್ಮರಣ ಹೋರಾಟ ನಡೆಸಿದ್ದಾನೆ.

ಚಿಕ್ಕಲಸಂದ್ರ ಬಳಿ ಮಹೇಶ್ ಅವರು ದಿನಸಿ ಅಂಗಡಿ ನಡೆಸುತ್ತಿದ್ದು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಅವರು ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರ ಪತ್ನಿ ಉದ್ಯೋಗದಲ್ಲಿದ್ದಾರೆ. ಮರಿಯಪ್ಪಪಾಳ್ಯ ಹತ್ತಿರದ ಖಾಸಗಿ ಶಾಲೆಯಲ್ಲಿ ಅವರ 13 ವರ್ಷದ ಕಿರಿಯ ಪುತ್ರ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎಂದಿನಂತೆ ಮಂಗಳವಾರ ಸಹ ಶಾಲೆಗೆ ಆತ ಹೋಗಿದ್ದ. ತರಗತಿಯಲ್ಲಿ ಸಹಪಾಠಿ ಜತೆ ಮಹೇಶ್ ಪುತ್ರ ಜಗಳವಾಡಿದ್ದಾನೆ. ಆಗ ತಂಟೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ದಂಡಿಸಿದ ಶಿಕ್ಷಕರು, ಆ ಇಬ್ಬರನ್ನು ತರಗತಿಯಿಂದ ಹೊರಗೆ ನಿಲ್ಲಿಸಿ ಶಿಕ್ಷೆ ವಿಧಿಸಿದ್ದರು ಎನ್ನಲಾಗಿದೆ.

ತನಗೆ ಹೊಡೆದಿದ್ದಲ್ಲದೆ ತರಗತಿಯಿಂದ ಹೊರ ಹಾಕಿ ಸಹಪಾಠಿಗಳ ಮುಂದೆ ಅವಮಾನಿಸಿದರು ಎಂದು ಶಿಕ್ಷಕರ ಮೇಲೆ ಸಂತ್ರಸ್ತ ವಿದ್ಯಾರ್ಥಿ ಕೋಪಗೊಂಡಿದ್ದ. ಶಾಲೆಯಿಂದ ಸಂಜೆ ಮನೆಗೆ ಮರಳಿದಾಗಲೂ ಆತನ ಬೇಸರವಿತ್ತು. ಈ ನೋವಿನಲ್ಲೇ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಯತ್ನಿಸಿದ್ದಾನೆ. ತಕ್ಷಣವೇ ವಿದ್ಯಾರ್ಥಿಗೆ ರಕ್ಷಣೆಗೆ ಆತನ ಪೋಷಕರು ಧಾವಿಸಿದ್ದಾರೆ. ನೇಣಿನ ಕುಣಿಕೆಯಿಂದ ಇಳಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದೆ.


ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ತಂದೆ ದೂರು

ತಮ್ಮ ಮಗನ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲೆಯ ಶಿಕ್ಷಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ಸಂತ್ರಸ್ತ ವಿದ್ಯಾರ್ಥಿ ತಂದೆ ಮಹೇಶ್ ದೂರು ನೀಡಿದ್ದಾರೆ. ಈ ಆಧರಿಸಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.