;Resize=(412,232))
ಬೆಂಗಳೂರು : ಕಿರುತೆರೆ ನಟಿ ನಂದಿನಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಆಕೆಯ ಕುಟುಂಬದವರು ಒತ್ತಡ ಹಾಕಿದ್ದೇ ಕಾರಣವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಎರಡು ವರ್ಷಗಳ ಹಿಂದೆ ಅನಾರೋಗ್ಯ ಹಿನ್ನೆಲೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ಮೃತ ನಂದಿನಿ ಅವರ ತಂದೆ ಮಹಾಬಲೇಶ್ವರ ಮೃತಪಟ್ಟಿದ್ದರು. ಅಕಾಲಿಕವಾಗಿ ತಂದೆ ನಿಧನ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇರೆಗೆ ನಂದಿನಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಆದರೆ, ಬಣ್ಣದ ಲೋಕದಲ್ಲಿ ಸ್ಟಾರ್ ಆಗುವ ಕನಸು ಕಂಡಿದ್ದ ನಂದಿನಿ, ತನಗೊಲಿದು ಬಂದಿದ್ದ ಸರ್ಕಾರಿ ನೌಕರಿಯನ್ನು ನಿರಾಕರಿಸಿದ್ದರು. ಆದರೆ ಜೀವನಕ್ಕೆ ಭದ್ರತೆ ಸಿಗಲಿದೆ ಎಂದು ಆಶಿಸಿದ್ದ ಆಕೆಯ ಕುಟುಂಬದವರು, ಸರ್ಕಾರಿ ಉದ್ಯೋಗಕ್ಕೆ ಸೇರುವಂತೆ ಒತ್ತಡ ಹಾಕುತ್ತಿದ್ದರು. ಆದರೆ ನಂದಿನಿ ಮಾತ್ರ ಒಪ್ಪಿರಲಿಲ್ಲ. ಎರಡು ಬಾರಿ ಸರ್ಕಾರಿ ಹುದ್ದೆಗೆ ಆಕೆಗೆ ನೇಮಕಾತಿ ಪತ್ರ ಬಂದಿತ್ತು. ಇದೇ ವಿಷಯವಾಗಿ ಬೇಸರಗೊಂಡು ನಂದಿನಿ ಆತ್ಮ*ತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಲ್ಲದೆ ಮೃತಳ ಕೋಣೆಯಲ್ಲಿ ಡೈರಿ ಪತ್ತೆಯಾಗಿದ್ದು, ಇದರಲ್ಲಿ ಸಹ ಸರ್ಕಾರಿ ನೌಕರಿ ವಿಷಯವನ್ನು ನಂದಿನಿ ಉಲ್ಲೇಖಿಸಿದ್ದಾರೆ. ತನಗೆ ಸರ್ಕಾರಿ ನೌಕರಿ ಸೇರಲು ಇಷ್ಟವಿಲ್ಲ. ನಟನೆಯಲ್ಲೇ ಮುಂದುವರೆಯಲು ಬಯಸಿದ್ದೇನೆ. ಆದರೆ ನನ್ನ ಕುಟುಂಬದವರು ಸರ್ಕಾರಿ ನೌಕರಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ನಂದಿನಿ ಬರೆದಿದ್ದಾರೆ ಎನ್ನಲಾಗಿದೆ.
ಮೈಲಸಂದ್ರದ ಲಿವಿಂಗ್ ಇನ್ಸ್ಟಾ ಪಿಜಿಯ ತನ್ನ ಕೊಠಡಿಯಲ್ಲಿ ಭಾನುವಾರ ರಾತ್ರಿ ನಂದಿನಿ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದರು. 2019ರಿಂದ ಕಿರುತೆರೆಯಲ್ಲಿ ಆಕೆ ನಟಿಸುತ್ತಿದ್ದರು. ಕನ್ನಡದಲ್ಲಿ ಜೀವ ಹೂವಾಗಿದೆ, ನೀನಾದೆ ನಾ, ಸಂಘರ್ಷ, ಮಧುಮಗಳು ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಂದಿನಿ ಪಾತ್ರವಹಿಸಿದ್ದರು. ಇತ್ತೀಚಿಗೆ ತಮಿಳು ಕಿರುತೆರೆಯಲ್ಲಿ ‘ಗೌರಿ’ ಧಾರವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದರು.