ಮನೆಯೊಂದರಲ್ಲಿ ತಂದೆ, 5 ವರ್ಷದ ಮಗ ನಿಗೂಢ ಸಾವು

KannadaprabhaNewsNetwork |  
Published : Aug 18, 2026, 02:00 AM IST
Abhinandan | Kannada Prabha

ಸಾರಾಂಶ

ನಗರದ ಹೊರವಲಯದ ಮನೆಯೊಂದರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿದ್ದು, ಮೃತರ ಪತ್ನಿ ವಿರುದ್ಧ ಕೊಲೆ ಆರೋಪ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹೊರವಲಯದ ಮನೆಯೊಂದರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿದ್ದು, ಮೃತರ ಪತ್ನಿ ವಿರುದ್ಧ ಕೊಲೆ ಆರೋಪ ಬಂದಿದೆ. ಚಿಕ್ಕಬಾಣವಾರ ಸಮೀಪದ ಗುಡ್ಡೆ ಬಸವೇಶ್ವರ ನಗರದ ನಿವಾಸಿ ಅಭಿನಂದನ್‌ (38) ಹಾಗೂ ಅವರ ಪುತ್ರ ಯದುವೀರ್ ಗೌಡ (4) ಮೃತ ದುರ್ದೈವಿಗಳು. ಈ ಕೊಲೆ ಆರೋಪದ ಮೇರೆಗೆ ಮೃತ ಪತ್ನಿ ಹರಿಣಿಯನ್ನು ಚಿಕ್ಕಬಾಣವಾರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮನೆಯಲ್ಲಿ ಅಭಿನಂದನ್‌ ಹಾಗೂ ಪುತ್ರ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಸೋಮವಾರ ಬೆಳಗ್ಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತರ ಕೋಣೆಗೆ ತೆರಳಿ ಪರಿಶೀಲಿಸಿದಾಗ ಉಸಿರುಗಟ್ಟಿ ಮೃತಪಟ್ಟ ಸ್ಥಿತಿಯಲ್ಲಿ ತಂದೆ-ಮಗನ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಾವಿನ ಹಿಂದೆ ಕೊಲೆ ಶಂಕೆ?

2021ರಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಭಿನಂದನ್‌ ಹಾಗೂ ಹರಿಣಿ ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ಮಗನಿದ್ದ. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅಭಿ, ಗುಡ್ಡೆ ಬಸವೇಶ್ವರ ನಗರದಲ್ಲಿ ತನ್ನ ಪತ್ನಿ ಹಾಗೂ ಮಗ ಯುದುವೀರ್ ಜತೆ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ಕಾರಣಗಳಿಗೆ ದಂಪತಿ ಮಧ್ಯೆ ಮನಸ್ತಾಪ ಮೂಡಿತ್ತು. ಈ ಹಿನ್ನಲೆಯಲ್ಲಿ ಅಭಿನಂದನ್‌ ಹಾಗೂ ಅವರ ಪುತ್ರನ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೊಲೆ ಶಂಕೆಗೆ ಕಾರಣವೇನು?

ಮನೆಯ ಕೋಣೆಯಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ವೇಳೆಗೆ ತಂದೆ-ಮಗ ನಿಗೂಢವಾಗಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮನೆಯಲ್ಲಿ ಬೆಳಗ್ಗೆ ಪತಿಯನ್ನು ಏಳಿಸಲು ಹೋದಾಗ ಅವರು ಮಾತನಾಡಲಿಲ್ಲ. ಮಗ ಸಹ ಪ್ರಜ್ಞಾಹೀನಾಗಿದ್ದ ಎಂದು ಸ್ಥಳೀಯರಿಗೆ ಮೃತರ ಪತ್ನಿ ಹರಿಣಿ ಹೇಳಿದ್ದಳು. ಆದರೆ ಪೊಲೀಸರ ವಿಚಾರಣೆಯಲ್ಲಿ ಒಮ್ಮೆ ತಾನೇ ಕೊಲೆ ಮಾಡಿದ್ದಾಗಿ ಹೇಳಿದರೆ ಮತ್ತೊಮ್ಮೆ ಆಕೆ ಹೇಳಿಕೆ ಬದಲಾಯಿಸುತ್ತಿದ್ದಾಳೆ. ಹೀಗಾಗಿ ಮಂಗಳವಾರ ಆಕೆಯನ್ನು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆಯಲ್ಲಿ ಅಭಿ ಹಾಗೂ ಅವರ ಪುತ್ರ ಯದುವೀರ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ಸಾಂದರ್ಭಿಕ ಸಾಕ್ಷ್ಯಗಳಿಂದ ತಿಳಿಯುತ್ತದೆ. ಆದರೆ ಈ ಹತ್ಯೆಯಲ್ಲಿ ಹರಿಣಿ ಜತೆ ಮತ್ತೊಬ್ಬರ ಕೈವಾಡವಿರಬಹುದು. ಗಾಢ ನಿದ್ರೆಯಲ್ಲಿದ್ದ ಅಭಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮನೆಯ ಸಿಸಿಟಿವಿ ಬಂದ್‌

ಮೃತ ಅಭಿ ಮನೆಯ ಸಿಸಿಟಿವಿ ಕ್ಯಾಮೆರಾಗಳು ಭಾನುವಾರ ರಾತ್ರಿ ಬಂದ್ ಆಗಿದ್ದವು. ದುರುದ್ದೇಶಪೂರ್ವಕವಾಗಿಯೇ ಮನೆಯ ಸಿಸಿಟಿವಿ ಕ್ಯಾಮೆರಾ ಕಾರ್ಯಸ್ಥಗಿತಗೊಳಿಸಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಅತ್ತೆ ಮನೆಯಲ್ಲಿ ರಾತ್ರಿ ಊಟ

ದಾಸರಹಳ್ಳಿಯಲ್ಲಿದ್ದ ಹರಿಣಿ ತವರು ಮನೆಯಲ್ಲಿ ಭಾನುವಾರ ರಾತ್ರಿ ಊಟ ಮುಗಿಸಿ ಪತ್ನಿ ಹಾಗೂ ಮಗನ ಜತೆ ಅಭಿನಂದನ್ ಮನೆಗೆ ಮರಳಿದ್ದರು. ಇದಾದ ನಂತರ ತಂದೆ-ಮಗ ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

-ಕೋಟ್‌-

ಚಿಕ್ಕಬಾಣವಾರದ ತಂದೆ-ಮಗನ ಸಾವಿನ ಸಂಬಂಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ನಂತರ ಸಾವಿನ ಹಿಂದಿರುವ ಕಾರಣ ಬಯಲಾಗಲಿದೆ.

-ಡಿ.ಎಲ್‌.ನಾಗೇಶ್, ಡಿಸಿಪಿ, ನೈರುತ್ಯ ವಿಭಾಗ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಲೆ ಶಿಕ್ಷಕರಿಬ್ಬರಿಗೆ ಎಚ್1ಎನ್1 500 ಮಕ್ಕಳಿಗೆ ಜ್ವರ?: 2 ದಿನ ರಜೆ ಘೋಷಣೆ
ಮಳವಳ್ಳಿ: ಬೈಕ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಸವಾರ ಸಾವು