ತಾಯಿಗೆ ವಕಾಲತ್ತು: ಮಗನಿಗೇ ಚಾಕು ಇರಿದ ತಂದೆ

KannadaprabhaNewsNetwork | Published : Jun 6, 2024 1:45 AM

ಸಾರಾಂಶ

ಕೌಟುಂಬಿಕ ಕಲಹದ ವೇಳೆ ತಾಯಿ ಪರ ವಹಿಸಿದ ಮಗನ ಎದೆಗೆ ಸಿಟ್ಟಿನಲ್ಲಿ ಚಾಕುವಿನಿಂದ ಇರಿದು ತಂದೆಯೇ ಕೊಂದಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದ ವೇಳೆ ತಾಯಿ ಪರ ವಹಿಸಿದ ಮಗನ ಎದೆಗೆ ಸಿಟ್ಟಿನಲ್ಲಿ ಚಾಕುವಿನಿಂದ ಇರಿದು ತಂದೆಯೇ ಕೊಂದಿರುವ ದಾರುಣ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಜರಗನಹಳ್ಳಿ ನಿವಾಸಿ ಬಿ.ಯಶವಂತ್ (23) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಮೃತನ ತಂದೆ ಬಸವರಾಜು ಅವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹಲವು ವರ್ಷಗಳಿಂದ ತಮ್ಮ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಜರಗನಹಳ್ಳಿಯಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಳಿಯೂರುದುರ್ಗದ ಬಸವರಾಜು ನೆಲೆಸಿದ್ದಾರೆ. ಮೊದಲು ಅವರು ಲಾರಿ ಚಾಲಕರಾಗಿದ್ದರು. ಎಂಜಿನಿಯರಿಂಗ್ ಓದು ಮುಗಿಸಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ ಬಳಿಕ ತಂದೆಗೆ ಮೃತ ಯಶವಂತ್ ಟಾಟಾ ಏಸ್ ಉಡುಗೊರೆ ನೀಡಿದ್ದ. ಆ ವಾಹನ ಓಡಿಸಿ ಕೊಂಡು ಬಸವರಾಜು ಜೀವನ ಸಾಗಿಸುತ್ತಿದ್ದರು. ಕೆಲವು ದಿನಗಳಿಂದ ಕೌಟುಂಬಿಕ ವಿಚಾರವಾಗಿ ಬಸವರಾಜು ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಆಗಾಗ್ಗೆ ಮನೆಯಲ್ಲಿ ಜಗಳವಾಗುತ್ತಿದ್ದವು.

ಅಂತೆಯೇ ಬುಧವಾರ ಬೆಳಗ್ಗೆ ಸಹ ಪತ್ನಿ ಭಾಗ್ಯಲಕ್ಷ್ಮೀ ಜತೆ ಬಸವರಾಜು ಜಗಳ ಶುರು ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಅವರು, ಅಡುಗೆ ಮನೆಯಿಂದ ತರಕಾರಿ ಕತ್ತರಿಸಲು ಇಟ್ಟಿದ್ದ ಚಾಕು ತಂದು ಪತ್ನಿಗೆ ಕೊಲ್ಲುವುದಾಗಿ ಬೆದರಿಸಿದ್ದಾರೆ. ಈ ಮಾತಿಗೆ ಆಕೆ ಕ್ಯಾರೇ ಎನ್ನದೆ ಮಾತಾಡಿದ್ದಾರೆ. ಆಗ ಮತ್ತಷ್ಟು ಕೆರಳಿದ ಅವರು, ಸೀದಾ ಪತ್ನಿಗೆ ಚಾಕು ಇರಿಯಲು ಮುಂದಾಗಿದ್ದಾರೆ. ಆಗ ಕಂಪನಿಗೆ ಕೆಲಸಕ್ಕೆ ತೆರಳಲು ಸಿದ್ದನಾಗುತ್ತಿದ್ದ ಯಶವಂತ್, ಕೂಡಲೇ ತಾಯಿ ರಕ್ಷಣೆಗೆ ಧಾವಿಸಿದ್ದಾನೆ. ಚಾಕು ಚುಚ್ಚಲು ಬಂದ ತಂದೆಯನ್ನು ತಡೆದು ಆತ ತಳ್ಳಿದ್ದಾನೆ. ಇದರಿಂದ ಕೋಪಗೊಂಡ ಬಸವರಾಜು, ಮಗನಿಗೆ ನನ್ನನ್ನೇ ತಳ್ಳುತ್ತೀಯಾ ಎಂದು ಬೈದಿದ್ದಾರೆ. ಈ ಹಂತದಲ್ಲಿ ತಂದೆ-ಮಗನ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಆಗ ಕೋಪದಲ್ಲಿ ಮಗ ಎದೆಗೆ ಅವರು ಚಾಕುವಿವಿನಿಂದ ಇರಿದಿದ್ದಾನೆ. ತಕ್ಷಣ‍ೇ ತಂದೆಗೆ ತಪ್ಪಿನ ಅರಿವಾಗಿದೆ. ಆದರೆ ಕಾಲ ಮಿಂಚಿ ಹೋಗಿತ್ತು. ಕೃತ್ಯ ಎಸಗಿದ ಬಳಿಕ ತಾವೇ ಆಸ್ಪತ್ರೆಗೆ ಮಗನನ್ನು ಅವರು ಕರೆದೊಯ್ದರು ಜೀವ ಉಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧ ತಾಯಿ ಆರೈಕೆಗೆ ಗಲಾಟೆ?

ಬಸವರಾಜು ಅವರಿಗೆ ವಯಸ್ಸಾದ ತಾಯಿ ಇದ್ದು, ವಯೋ ಸಹಜ ಕಾಯಿಲೆಗಳಿಂದ ಅವರು ಹಾಸಿಗೆ ಹಿಡಿದಿದ್ದಾರೆ. ವೃದ್ಧ ತಾಯಿ ಆರೈಕೆ ವಿಚಾರವಾಗಿ ಬಸವರಾಜು ದಂಪತಿ ಮಧ್ಯೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ಬಸವರಾಜು ಅವರ ಕಿರಿಯ ಸೋದರ ವಿದೇಶದಲ್ಲಿದ್ದು, ಸೋದರನಿಗೆ ಆರ್ಥಿಕವಾಗಿ ಸಹ ಅವರು ನೆರವು ನೀಡುತ್ತಿದ್ದರು. ನಮಗೆ ಹಣ ಕೊಟ್ಟರೆ ಸಾಲದೆ ಬಂದು ತಾಯಿ ನೋಡಿಕೊಳ್ಳಲಿ ಎಂದು ಪತಿಗೆ ಭಾಗ್ಯಲಕ್ಷ್ಮೀ ಹೇಳುತ್ತಿದ್ದರು. ತನ್ನ ತಾಯಿ ಬಗ್ಗೆ ಉದಾಸೀನತೆ ತೋರುತ್ತಾಳೆ ಎಂದು ಪತ್ನಿ ಮೇಲೆ ಬಸವರಾಜು ಅಸಮಾಧಾನಗೊಂಡಿದ್ದರು ಎಂದು ಮೂಲಗಳು ಹೇಳಿವೆ.

ಹುಟ್ಟು ಹಬ್ಬದ ಸೆಲ್ಫಿ ಕಲಹ:

ತನ್ನ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮನೆಯಲ್ಲಿ ಎಲ್ಲರ ಜತೆ ಬಸವರಾಜು ಪುತ್ರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಆಗ ಮಗಳಿಗೆ ಅಜ್ಜಿ ಜತೆ ಪೋಟೋ ತೆಗೆದುಕೊಂಡು ಚಿಕ್ಕಪ್ಪನಿಗೆ ಕಳಿಸು ಎಂದು ಬಸವರಾಜು ಹೇಳಿದ್ದಾರೆ. ಈ ಮಾತಿಗೆ ಭಾಗ್ಯಲಕ್ಷ್ಮೀ ಕೊಂಕಾಡಿದಾಗ ಜಗಳ ಶುರುವಾಗಿದೆ ಎಂದು ಗೊತ್ತಾಗಿದೆ.

Share this article