ಹೆಣ್ಣು ಭ್ರೂಣ ಹತ್ಯೆ: ಗರ್ಭಿಣಿಯರ ಮೇಲೆ ನಿಗಾ ವಹಿಸಿ: ಕೆ.ನಾಗಣ್ಣಗೌಡ

KannadaprabhaNewsNetwork |  
Published : Dec 02, 2023, 12:45 AM IST
೧ಕೆಎಂಎನ್‌ಡಿ-೬ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಪಟ್ಟಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು. | Kannada Prabha

ಸಾರಾಂಶ

ಪ್ರತಿ ಗ್ರಾಮಗಳಲ್ಲಿರುವ ಗರ್ಭಿಣಿಯರ ಮೇಲೆ ನಿಗಾ ವಹಿಸಿ, ಅವರ ಚಲನ ವಲನಗಳ ಮೇಲೆ ಗಮನಹರಿಸಬೇಕು. ಮಹಿಳೆಯರಿಗೆ ಭ್ರೂಣ ಹತ್ಯೆಯ ದುಷ್ಪರಿಣಾಮ, ಕಾನೂನು ಹಾಗೂ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಭ್ರೂಣ ಹತ್ಯೆ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲು ಸೂಚನೆ । ಮಂಡ್ಯದ ಡೀಸಿ ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರತಿ ಗ್ರಾಮಗಳಲ್ಲಿರುವ ಗರ್ಭಿಣಿಯರ ಮೇಲೆ ನಿಗಾ ವಹಿಸಿ, ಅವರ ಚಲನ ವಲನಗಳ ಮೇಲೆ ಗಮನಹರಿಸಬೇಕು. ಮಹಿಳೆಯರಿಗೆ ಭ್ರೂಣ ಹತ್ಯೆಯ ದುಷ್ಪರಿಣಾಮ, ಕಾನೂನು ಹಾಗೂ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಚುರುಕಿನಿಂದ ಕಾರ್ಯನಿರ್ವಹಿಸುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಪಟ್ಟಂತೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಾಲ್ಯವಿವಾಹದ ಪ್ರಕರಣ ಹೆಚ್ಚಿದೆ. ಬಾಲ್ಯವಿವಾಹವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಬಾಲ್ಯವಿವಾಹದ ಬಗ್ಗೆ ಯಾರು ಬೇಕಾದರೂ ಎಫ್‌ಐಆರ್ ದಾಖಲಿಸಬಹುದು. ಬಾಲ್ಯವಿವಾಹ ಸಾಬೀತಾದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸ. ಈ ರೀತಿಯ ಕೃತ್ಯಗಳಿಗೆ ಯಾರೂ ಅವಕಾಶ ನೀಡಬಾರದು. ಕಾನೂನು ಅಸ್ತ್ರ ಬಳಸಿ ಪರಿಣಾಮಕಾರಿಯಾಗಿ ತಡೆಗಟ್ಟಲು ಎಲ್ಲರೂ ಪಣತೊಡಬೇಕಿದೆ. ೨೧ನೇ ಶತಮಾನದಲ್ಲೂ ಇಂತಹ ಭ್ರೂಣ ಹತ್ಯೆ, ಲಿಂಗ ತಾರತಮ್ಯ ಎಣಿಸುತ್ತಿರುವುದು ಅಮಾನವೀಯ. ಉಸ್ತುವಾರಿ ಸಚಿವರು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮಿತಿ ರಚಿಸಿದ್ದಾರೆ. ಈ ಸಮಿತಿಯನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಭ್ರೂಣ ಹತ್ಯೆ ಚಟುವಟಿಕೆಗಳು ಎಲ್ಲೂ ನಡೆಯಬಾರದು. ಅನಧಿಕೃತ ನರ್ಸಿಂಗ್ ಹೋಮ್, ಡಯಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಇಂತಹ ಕೃತ್ಯ ಕಂಡು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಜಿಲ್ಲಾ ಹಾಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸಬೇಕು. ಸ್ಥಳೀಯ ಗುಪ್ತಚರ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಭ್ರೂಣ ಹತ್ಯೆ ಪ್ರಕರಣಗಳು ನಡೆಯದಂತೆ ಜಾಗೃತಿ ವಹಿಸುವಂತೆ ಸೂಚಿಸಿದರು.

ಗ್ರಾಮೀಣ ಮಟ್ಟದಲ್ಲಿ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕಾರ್ತೆ, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಅಧಿಕಾರಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ತಿಂಗಳಿಗೊಮ್ಮೆ ಗರ್ಭಿಣಿಯರ ಸಭೆ ನಡೆಸುವಂತೆ ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, ಡಿವೈಎಸ್ಪಿ ಶಿವಮೂರ್ತಿ, ತಹಸೀಲ್ದಾರ್ ಡಾ.ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!