ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮತ್ತೊಮ್ಮೆ ಭರ್ಜರಿ ಡ್ರಗ್ಸ್ ಬೇಟೆ ಆಡಿರುವ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ), ಅಂತಾರಾಜ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ ಹಾಗೂ 10 ಕೋಟಿ ರು. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದೆ.
ನವದೆಹಲಿ: ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಮತ್ತೊಮ್ಮೆ ಭರ್ಜರಿ ಡ್ರಗ್ಸ್ ಬೇಟೆ ಆಡಿರುವ ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ), ಅಂತಾರಾಜ್ಯ ಕಳ್ಳಸಾಗಣೆ ಜಾಲವನ್ನು ಭೇದಿಸಿದೆ ಹಾಗೂ 10 ಕೋಟಿ ರು. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದೆ. ಇದೇ ವೇಳೆ, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಪ್ತ ಹೈಟೆಕ್ ಡ್ರಗ್ಸ್ ಉತ್ಪಾದನಾ ಘಟಕವನ್ನು (ಡ್ರಗ್ಸ್ ಕಾರ್ಖಾನೆ) ಪತ್ತೆ ಹಚ್ಚಿದೆ.
ಕೆಲ ತಿಂಗಳ ಹಿಂದಷ್ಟೇ ಮಹಾರಾಷ್ಟ್ರ ಪೊಲೀಸರ ತಂಡ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆ ಮಾಡಿ, 380 ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿತ್ತು. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಫ್ಯಾಕ್ಟರಿ ಪತ್ತೆಯಾಗಿದೆ.
ಕರ್ನಾಟಕದ ಸುಳಿವು:
ಜ.28ರಂದು ನಿಖರವಾದ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಎನ್‌ಸಿಬಿ ಅಧಿಕಾರಿಗಳು, ಗುಜರಾತ್‌ನ ಸೂರತ್ ಜಿಲ್ಲೆಯ ಪಲ್ಸಾನಾದಲ್ಲಿ ಟೊಯೋಟಾ ಫಾರ್ಚೂನರ್ ಕಾರನ್ನು ತಡೆಹಿಡಿದಿದ್ದರು. ಆಗ ಕರ್ನಾಟಕ ನೋಂದಣಿಯ ಆ ಕಾರಿನಲ್ಲಿ 35 ಕೇಜಿ ಮೆಫೆಡ್ರೋನ್ (ಎಂಡಿ) ಪತ್ತೆಯಾಗಿತ್ತು. ಬಳಿಕ ನಾಲ್ವರನ್ನು ತಕ್ಷಣವೇ ಬಂಧಿಸಲಾಗಿತ್ತು. ಅವರು ರಾಜಸ್ಥಾನದಲ್ಲಿ ವಿತರಣೆಗಾಗಿ ಡ್ರಗ್ಸ್ ಸಾಗಿಸುತ್ತಿದ್ದರು. ಅವರು ನೀಡಿದ ಸುಳಿವು ಆಧರಿಸಿ ಮೈಸೂರಲ್ಲಿ ಡ್ರಗ್ಸ್ ಕಾರ್ಖಾನೆ ಪತ್ತೆ ಮಾಡಲಾಗಿದೆ.
ರಾಜಸ್ಥಾನದ ರೂವಾರಿ:
ಬಂಧಿತರಲ್ಲಿ ಕಾರ್ಯಾಚರಣೆಯ ಮುಖ್ಯ ರೂವಾರಿ, ರಾಜಸ್ಥಾನದ ಜಾಲೋರ್‌ನ ಕುಖ್ಯಾತ ಡ್ರಗ್ಸ್ ವ್ಯಾಪಾರಿ ಮಹೀಂದ್ರ ಕುಮಾರ್ ವಿಷ್ಣೋಯಿ ಕೂಡ ಇದ್ದ. ಆತನ ಪಾಲ್ಸಾನಾ ನಿವಾಸದ ಮೇಲೆ ದಾಳಿ ನಡೆಸಿದಾಗ ಶೋಧದಲ್ಲಿ 1.8 ಕೆಜಿ ಅಫೀಮು, 25.6 ಲಕ್ಷ ರು. ನಗದು ಮತ್ತು ವಿವಿಧ ರಾಸಾಯನಿಕಗಳು ಪತ್ತೆಯಾಗಿದ್ದವು. ಆತನಿಗೆ ಅಫೀಮು ಮತ್ತು ಮಾದಕ ದ್ರವ್ಯ ಮಾರಾಟದ ಇತಿಹಾಸವಿದೆ ಎಂದು ಎನ್‌ಸಿಬಿ ಹೇಳಿದೆ.
ಇಲ್ಲಿಯವರೆಗೆ ಬಂಧಿಸಲಾದ ನಾಲ್ವರು ಆರೋಪಿಗಳು ರಾಜಸ್ಥಾನದ ಜಾಲೋರ್ ಜಿಲ್ಲೆಯವರು.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಸುಮಾರು 10 ಕೋಟಿ ರು. ಮೌಲ್ಯದ ಡ್ರಗ್ಸ್, 25.6 ಲಕ್ಷ ರು. ಮೌಲ್ಯದ ನಗದು, ಟೊಯೋಟಾ ಫಾರ್ಚೂನರ್ ವಾಹನ ಮತ್ತು 500 ಕೆಜಿಗಿಂತ ಹೆಚ್ಚು ತೂಕದ ವಿವಿಧ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಅಂಶ:
ವಿಷ್ಣೋಯಿ ಸೇರಿ ನಾಲ್ವರ ವಿಚಾರಣೆ ನಡೆದಾಗ ಬೆಚ್ಚಿಬೀಳಿಸುವ ಅಂಶಗಳು ಬಯಲಾದವು. ಹಿಂದೊಮ್ಮೆ ಎನ್‌ಡಿಪಿಎಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ವಿಷ್ಣೋಯಿ, ಸಂಶ್ಲೇಷಿತ ಡ್ರಗ್ಸ್ ತಯಾರಿಸುವ ಯೋಜನೆ ರೂಪಿಸಿದ್ದ ಎಂದು ಹೇಳಲಾಗಿದೆ.
ಇತರ ಕೈದಿಗಳೊಂದಿಗೆ ನೆಟ್‌ವರ್ಕಿಂಗ್ ಮಾಡುವ ಮೂಲಕ, ಆತ ಡ್ರಗ್ಸ್ ಉತ್ಪಾದನಾ ಪ್ರಕ್ರಿಯೆ, ಮಾರುಕಟ್ಟೆ ಬೇಡಿಕೆ ಮತ್ತು ಅಕ್ರಮ ಪೂರೈಕೆ ಜಾಲ ಮತ್ತು ರಹಸ್ಯ ಪ್ರಯೋಗಾಲಯಕ್ಕೆ ಬೇಕಾದ ಮೂಲವಸ್ತುಗಳ ಬಗ್ಗೆ ಜ್ಞಾನ ಪಡೆದಿದ್ದ. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಕರ್ನಾಟಕದ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದ. ಈ ಮೂಲಕ ಜೈಲಲ್ಲಿ ತಾನು ಪಡೆದಿದ್ದ ಜ್ಞಾನವನ್ನು ಬಳಸಿಕೊಂಡ.
ವಿಚಾರಣೆ ವೇಳೆ ಸಿಕ್ಕ ಈ ಮಾಹಿತಿಯಂತೆ ಎನ್‌ಸಿಬಿ, ಮೈಸೂರು ಡ್ರಗ್ಸ್ ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿದೆ. ಈ ಘಟಕವು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದ ಪೂರ್ಣ ಪ್ರಮಾಣದ ರಹಸ್ಯ ಪ್ರಯೋಗಾಲಯ ಎಂದು ಕಂಡುಬಂದಿದೆ. ಯಾರಿಗೂ ಅನುಮಾನ ಬಾರದಿರಲಿ ಎಂದು ಆತ ಈ ಡ್ರಗ್ಸ್ ಕಾರ್ಖಾನೆಯನ್ನು ‘ಇಂಡಸ್ಟ್ರಿಯಲ್ ಕ್ಲೀನಿಂಗ್ ಕೆಮಿಕಲ್’ ಉತ್ಪಾದನಾ ಘಟಕ ಎಂದು ಬಿಂಬಿಸಿದ್ದ. ಇದೀಗ ಈ ಡ್ರಗ್ಸ್ ಕಾರ್ಖಾನೆಯನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸೀಲ್ ಮಾಡಲಾಗಿದೆ.
ಈ ಪ್ರಯೋಗಾಲಯವು 2024ರಿಂದ ಕಾರ್ಯನಿರ್ವಹಿಸುತ್ತಿದ್ದು, ಡ್ರಗ್ಸ್ ಕನ್ಸೈನ್‌ಮೆಂಟ್‌ಗಳನ್ನು ಯಶಸ್ವಿಯಾಗಿ ವಿತರಿಸಿದೆ ಎಂದು ಎನ್‌ಸಿಬಿ ಹೇಳಿದೆ.
ಇದು ಫಿನಾಯಿಲ್ ಫ್ಯಾಕ್ಟರಿ
ಮೈಸೂರಿನಲ್ಲಿ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿರುವುದು ಫಾಲೋಅಪ್ ಕೇಸ್ ಅಷ್ಟೇ. ಅಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳು ಸಿಕ್ಕಿಲ್ಲ. ಅದು ಫಿನಾಯಿಲ್ ತಯಾರು ಮಾಡುವ ಫ್ಯಾಕ್ಟರಿ. ಡ್ರಗ್ಸ್ ಸಂಬಂಧಪಟ್ಟ ಯಾವ ಕಚ್ಚಾ ವಸ್ತು ಇಲ್ಲಿ ಸಿಕ್ಕಿಲ್ಲ. ಅಲ್ಲಿ ಸಿಕ್ಕ ಆರೋಪಿಗಳ ಸಂಬಂಧಿಕರನ್ನು ಅಧಿಕಾರಿಗಳು ವಿಚಾರಣೆ ಮಾಡಿದ್ದು, ಯಾರನ್ನು ಸಹ ವಶಕ್ಕೆ ಪಡೆದಿಲ್ಲ.
- ಡಾ.ಜಿ.ಪರಮೇಶ್ವರ, ಗೃಹ ಸಚಿವ
- ರಾಸಾಯನಿಕದ ಹೆಸರಲ್ಲಿ ಡ್ರಗ್ಸ್ ಉತ್ಪಾದನೆಗೆ ಸಜ್ಜು: ದೆಹಲಿ ಎನ್‌ಸಿಬಿ ಮಾಹಿತಿ
- ರಾಜಸ್ಥಾನ ಜೈಲು ಜ್ಞಾನ ಬಳಸಿ ಫ್ಯಾಕ್ಟರಿ ಸ್ಥಾಪಿಸಿದ್ದ ಗುಜರಾತ್‌ನ ಮಹೀಂದ್ರ ಸೆರೆ
ಇತ್ತೀಚೆಗೆ ಗುಜರಾತ್‌ನಲ್ಲಿ ಕರ್ನಾಟಕ ನೋಂದಣಿ ಕಾರು, ಡ್ರಗ್ಸ್ ಪತ್ತೆಯಾಗಿತ್ತು
ತನಿಖೆ ವೇಳೆ ಪ್ರಮುಖ ಆರೋಪಿ ಮಹೀಂದ್ರಾ ಸೇರಿ ನಾಲ್ವರ ಕುರಿತ ಮಾಹಿತಿ
ಅವರಿತ್ತ ಸುಳಿವಿನ ಮೇರೆಗೆ ಮೈಸೂರಲ್ಲಿ ದಾಳಿ. ಅಲ್ಲಿ ಹೈಟೆಕ್ ಫ್ಯಾಕ್ಟರಿ ಪತ್ತೆ
ಮೈಸೂರಲ್ಲಿ ಅತ್ಯಾಧುನಿಕ ಯಂತ್ರ ಅಳವಡಿಸಿ ಡ್ರಗ್ಸ್ ಉತ್ಪಾದನೆಗೆ ಸಿದ್ಧತೆ
ಈ ಸಂಬಂಧ ಗುರುವಾರ ಮೈಸೂರಲ್ಲಿ ಗಣಪತ್‌ಲಾಲ್ ಎಂಬಾತನ ಬಂಧನ

