ಮದ್ಯ ಸೇವಿಸಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ ಆರೋಪದ ಮೇರೆಗೆ ಕನ್ನಡ ಚಿತ್ರನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ಸೇವಿಸಿ ಕಾರು ಚಲಾಯಿಸಿ ಸರಣಿ ಅಪಘಾತ ಮಾಡಿದ ಆರೋಪದ ಮೇರೆಗೆ ಕನ್ನಡ ಚಿತ್ರನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಮೂರು ಕಾರುಗಳಿಗೆ ಹಾನಿಯಾಗಿದೆ. ಕಾರು ಚಾಲಕ ಶ್ರೀನಿವಾಸ್ ಅವರು ನೀಡಿದ ದೂರಿನ ಮೇರೆಗೆ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮನೆಗೆ ಫಾರ್ಚೂನರ್‌ನಲ್ಲಿ ಅತಿವೇಗವಾಗಿ ಓಡಿಸಿಕೊಂಡು ಮಯೂರು ಪಟೇಲ್ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಚಾಲನೆ ಮೇಲೆ ನಿಯಂತ್ರಣ ತಪ್ಪಿ ಕಮಾಂಡೋ ಆಸ್ಪತ್ರೆ ಬಳಿ ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಏಕಾಏಕಿ ಹಿಂದಿನಿಂದ ಅವರು ಗುದ್ದಿಸಿದ್ದಾರೆ. ಈ ಘಟನೆಗೆ ಶ್ರೀನಿವಾಸ್, ಅಭಿಷೇಕ್ ಎಂಬುವರಿಗೆ ಸೇರಿದ ಕಾರುಗಳು ಜಖಂಗೊಂಡಿವೆ. ಕೂಡಲೇ ಘಟನೆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಕರೆ ಮಾಡಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಹಲಸೂರು ಸಂಚಾರ ಠಾಣೆ ಪೊಲೀಸರು, ಮಯೂರ್ ಅವರನ್ನು ಠಾಣೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಬ್ರೇಕ್ ವೈಫಲ್ಯ ಎಂದ ಮಯೂರ್ನನ್ನ ಕಾರಿನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿತು. ಟ್ರಿನಿಟಿ ಸರ್ಕಲ್‌ನಿಂದ ದೊಮ್ಮಲೂರಿನಲ್ಲಿರುವ ಮನೆ ಕಡೆಗೆ ತೆರಳುತ್ತಿದ್ದೆ. ಆಗ ನಾನು ಬ್ರೇಕ್ ತುಳಿದರೂ ಸಹ ವರ್ಕ್ ಆಗಲಿಲ್ಲ. ಆಗ ಮುಂದೆ ಇದ್ದ ಕಾರಿಗೆ ನಿಯಂತ್ರಣ ತಪ್ಪಿ ನನ್ನ ಕಾರು ಡಿಕ್ಕಿಯಾಯಿತು. ಘಟನೆಯಲ್ಲಿ ನನ್ನ ಕಾರಿಗೂ ಸಹ ಹಾನಿಯಾಗಿದೆ. ಅಪಘಾತ ತಪ್ಪಿಸಲು ಸಾಕಷ್ಟು ಯತ್ನಿಸಿದೆ. ಆದರೆ ಪ್ರಯೋಜನವಾಗಲಿಲ್ಲ. ಹ್ಯಾಂಡ್ ಬ್ರೇಕ್ ಎಲ್ಲಾ ಹಾಕಿ ಟ್ರೈ ಮಾಡಿದರೂ ಕಾರನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ನನಗೆ ಕಾರಿಗೆ ವಿಮೆ ಇದೆ ಎಂದು ಮಯೂರ್ ಪಟೇಲ್ ಹೇಳಿದ್ದಾರೆ.
ಪತ್ನಿ ಚಿನ್ನ ಅಡವಿಟ್ಟು ಕಾರು ಖರೀದಿಸಿದ್ದೆ: ಚಾಲಕ ಕಣ್ಣೀರುಸಿಗ್ನಲ್ನಲ್ಲಿ ನಿಂತಿದ್ದ ನನ್ನ ಕಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾಯಿತು. ಆಗ ಮುಂದಿನ ಕಾರಿಗೆ ನನ್ನ ಕಾರು ಗುದ್ದಿತು. ಘಟನೆಯಲ್ಲಿ ನಾಲ್ಕು ಕಾರುಗಳಿಗೆ ಹಾನಿಯಾಯಿತು. ಆಗ ಕಾರಿನಿಂದಿಳಿದ ಮಯೂರ್, ತಾನು ಸಿನಿಮಾ ನಟ. ಬೆಳಗ್ಗೆ ಸಮಸ್ಯೆ ಬಗೆಹರಿಸುವೆ ಎಂದರು. ಆದರೆ ಈಗಲೇ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಅಷ್ಟರಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಅವರನ್ನು ಕರೆದೊಯ್ದರು. ಹದಿನೈದು ದಿನಗಳ ಹಿಂದಷ್ಟೇ ಪತ್ನಿ ಚಿನ್ನ ಅಡವಿಟ್ಟು ಹೊಸ ಕಾರು ಖರೀದಿಸಿದ್ದೆ. ಘಟನೆ ವೇಳೆ ಪ್ರಯಾಣಿಕರು ಇದ್ದರು. ಮುಂದೆ ಜೀವನ ಹೇಗೆ ಸಾಗಿಸಲಿ ಎಂದು ಚಾಲಕ ಶ್ರೀನಿವಾಸ್ ಕಣ್ಣೀರಿಟ್ಟರು.
