ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ನಷ್ಟವಾದ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಗೊಂದಿಹಳ್ಳಿಯ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಅಪಾರ ನಷ್ಟವಾದ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಗೊಂದಿಹಳ್ಳಿಯ ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಗ್ರಾಮದ ರೈತ ಚನ್ನವೀರಪ್ಪ ಅವರು ತಮ್ಮ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಗದ್ದೆಗೆ ಸೋಮವಾರ ಬೆಂಕಿ ಬಿದ್ದು ಕಬ್ಬು, ತೆಂಗಿನ ಸಿಸಿಗಳು ಸುಟ್ಟು ನಾಶವಾಗಿವೆ.
ಕಬ್ಬಿಗೆ 10 ತಿಂಗಳಾಗಿದ್ದು ಕಟಾವಿಗೆ ಸಿದ್ಧವಾಗಿತ್ತು. ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಬಿರು ಬೇಸಿಗೆಯಲ್ಲಿ ಒಣಗಿ ನಿಂತಿದ್ದ ಕಬ್ಬು, ತರಗಿಗೆ ಬೆಂಕಿ ಹೊತ್ತಿಕೊಂಡಿದೆ.
ಗಾಳಿ ರಭಸಕ್ಕೆ ಬೆಂಕಿ ಗದ್ದೆಯನ್ನಲೆಲ್ಲಾ ಆವರಿಸಿದೆ. ಬೆಂಕಿ ಕಿಡಿಗೆ ಜಮೀನಿನಲ್ಲಿದ್ದ ಫಲ ಬಿಡುತ್ತಿದ್ದ 50ಕ್ಕೂ ಹೆಚ್ಚು ತೆಂಗಿನ ಮರಗಳು ನಾಶವಾಗಿ ಲಕ್ಷಾಂತರ ರು. ನಷ್ಟವಾಗಿದೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದರು. ಸುಮಾರು 1 ಎಕರೆಯಷ್ಟು ಕಬ್ಬಿಗೆ ಬೆಂಕಿ ತಗಲುವುದನ್ನು ತಪ್ಪಿಸಿ ರಕ್ಷಿಸಿದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿ ದಿನೇಶ್, ಸಚಿನ್, ಚಂದನ್‌ಕುಮಾರ್, ಶ್ರೀಶೈಲ ಕುದರಿ, ಶ್ರೀಧರ್ ಅವಟಿ, ಸಚಿನ್ ಕರದಿನ್ ಹಾಜರಿದ್ದರು.
ಶಾಸಕರಿಂದ 20 ಸಾವಿರ ರು. ಪರಿಹಾರ:
ವಿಷಯ ತಿಳಿದು ಶಾಸಕ ಎಚ್.ಟಿ.ಮಂಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ರೈತ ಚನ್ನವೀರಪ್ಪನಿಗೆ ಸಾಂತ್ವನ ಹೇಳಿದರು. ತ್ವರಿತವಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಅಲ್ಲದೇ, 20 ಸಾವಿರ ರು ನೀಡಿದರು. ಈ ವೇಳೆ ಮುಖಂಡ ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ದೇವೇಗೌಡ ಭೈರಾಪುರ ಹರೀಶ್ ಉಪಸ್ಥಿತರಿದ್ದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ 3 ಎಕರೆ ಬೆಳೆ ನಾಶ
ಭಾರತೀನಗರ:ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 3 ಎಕೆರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಪೈರು, 300ಕ್ಕೂ ಹೆಚ್ಚು ತೆಂಗಿನ ಸಸಿಗಳು, ಬೆಲೆ ಬಾಳುವ ಮರಗಳು ಸುಟ್ಟು ಕರಕಲಾಗಿರುವ ಘಟನೆ ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹೊರವಲಯದ ರೈತರ ಜಮೀನಿನಲ್ಲಿ ನಡೆದಿದೆ.ಗ್ರಾಮದ ರೈತರಾದ ಯೋಶಧಮ್ಮ ನಿಂಗೇಗೌಡ, ಎಂ.ಜೆ.ಕೆಂಪೇಗೌಡ, ಎಂ.ಜೆ.ಲಕ್ಷ್ಮಣ, ದೇವಮ್ಮ, ಕದರನ ಕಾಳೇಗೌಡ, ಎಂ.ಈರೇಗೌಡ, ಆನಂದ್, ದೇವಮ್ಮಮೊಟ್ಟೆದೇವಯ್ಯ, ಎಂ.ಜೆ.ಹರ್ಷ, ಜವರೇಗೌಡ, ಸುರೇಶ, ಭೀಮನತಿಮ್ಮನ ಕೆಂಪೇಗೌಡ, ಚಿಕ್ಕನಾಥೇಗೌಡರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಪೈರು, ತೆಂಗಿನ ಸಸಿಗಳು, ಬೆಲೆ ಬಾಳುವ ಬಾಗೆಮರ, ಉಳಚಿಮರ, ನೀಲಗಿರಿಮರ ಸೇರಿದಂತೆ 400ಕ್ಕೂ ಹೆಚ್ಚು ವಿವಿಧ ಬಗೆಯ ಮರಗಳು ಸುಟ್ಟು ನಾಶವಾಗಿವೆ.ಬೆಂಕಿಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಬೇರೆಯವರ ಜಮೀನಿಗೆ ತಾಗದಂತೆ ಎಚ್ಚರ ವಹಿಸಿ ಬೆಂಕಿ ನಂದಿಸಿದ್ದಾರೆ.ಈ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಜಮೀನಿನ ಮಾಲೀಕರು ಮತ್ತು ಮುಖಂಡ ಚಂದ್ರಶೇಖರ್ ಒತ್ತಾಯಿಸಿದ್ದಾರೆ.